ಸಿದ್ದರಾಮಯ್ಯ ಸರಕಾರದ ಸಾಲ ಗ್ಯಾರಂಟಿ ಬಜೆಟ್: ಕ್ಯಾ. ಗಣೇಶ್ ಕಾರ್ಣಿಕ್
ಮಂಗಳೂರು: 17 ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ಎಲ್ಲೋ ಸಾಲ ಮಾಡಿಯಾದ್ರೂ ಅಧಿಕಾರಕ್ಕೆ ಅಂಟಿಕೊಳ್ಳುವ ಕಸರತ್ತು ಮಾಡಿದಂತೆ ತೋರುತ್ತಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಒಟ್ಟು ಸಾಲ 8,24,389 ಕೋಟಿಗೆ ಏರಿದೆ. ಬಜೆಟ್ ಗಾತ್ರ 4.48 ಲಕ್ಷ ಕೋಟಿ ಮಾತ್ರ. ಈ ಸಾಲಿನ ಬಹಿರಂಗ ಮಾರುಕಟ್ಟೆ ಸಾಲದ ಗಾತ್ರವೇ 1,22,340 ಕೋಟಿ. ರಾಜ್ಯವನ್ನು ಎತ್ತ ತೆಗೆದುಕೊಂಡು ಹೋಗುತ್ತಿದ್ದೀರಿ ಸ್ವಾಮಿ.?
ಕೇಂದ್ರದ ಬಜೆಟ್ ಬಂದ ಕೂಡಲೇ ಕರ್ನಾಟಕಕ್ಕೆ ಅನ್ಯಾಯ ಎಂದು ಸುಳ್ಳು ಲೆಕ್ಕ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುವ ನಿಮಗೆ ರಾಜ್ಯದ ಒಂದು ಸಮುದಾಯ ಮಾತ್ರ ಪ್ರಾಮುಖ್ಯವಾಯಿತೇ.?
ಓಲೈಕೆ ರಾಜಕಾರಣವನ್ನೇ ಪಕ್ಷದ ಸಿದ್ಧಾಂತವನ್ನಾಗಿಸಿದ ಇಂದಿರಾ ಕಾಂಗ್ರೆಸ್‌ನ ಕರ್ನಾಟಕ ಸರಕಾರದ 17 ಬಜೆಟ್ ಮಂಡಿಸಿದ ಖ್ಯಾತಿಯ ಬಜೆಟ್ ಶೂರ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಬ್ರದರ್ಸ್ ಬಜೆಟ್’ ಮಂಡಿಸಿ ರಾಜ್ಯದ ಬಹು ಸಂಖ್ಯಾತರಿಗೆ ಅನ್ಯಾಯ ಮಾಡಿದ್ದಾರೆ.
ವಕ್ಫ್ ಆಸ್ತಿ ಅಭಿವೃದ್ಧಿ, ಅಲ್ಪಸಂಖ್ಯಾತರ ಮಕ್ಕಳಿಗೆ ಲ್ಯಾಪ್‌ಟಾಪ್‌ಗೆ ಹಣ, ಅಲ್ಪಸಂಖ್ಯಾತ ಖಾಲಿ ಹುದ್ದೆ ತುಂಬಲು ಕ್ರಮ, ಅಲ್ಪಸಂಖ್ಯಾತ ಉದ್ಯೋಗಸ್ಥ ಮಹಿಳೆಯರಿಗೆ 4 ವಸತಿ ನಿಲಯ, ಅಲ್ಪಸಂಖ್ಯಾತ ನಿಗಮದ ಸಾಲ ಬಡ್ಡಿ ಮನ್ನಾ, ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಹಜ್ ಭವನ ನಿರ್ಮಾಣ, ಅಲ್ಪಸಂಖ್ಯಾತ ಮಹಿಳೆಯರಿಗಾಗಿ ಸೊಸೈಟಿ ಸ್ಥಾಪನೆ, ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ 3 ಲಕ್ಷ ರೂ.ವರೆಗೆ ಸಹಾಯ ಧನ, ಅಲ್ಪಸಂಖ್ಯಾತ ನಿರ್ಗತಿಕರಿಗೆ ವ್ರದ್ಧಾಶ್ರಮ, ಅಲ್ಪಸಂಖ್ಯಾತ ಕಾಲೋನಿಗಳಿಗೆ ನೂರಾರು ಕೋಟಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ವಿಶೇಷ ತರಬೇತಿ, ಅಲ್ಪಸಂಖ್ಯಾತರಿಗಾಗಿ ವಸತಿ ಶಾಲೆ, ಅಲ್ಪಸಂಖ್ಯಾತರ ಶಾಲೆಗಳ ಅಭಿವೃದ್ಧಿಗಾಗಿ 1000 ಕೋಟಿ... ಹೇಳಿ ಮುಖ್ಯಮಂತ್ರಿಗಳೇ... ಬಹುಸಂಖ್ಯಾತರು ಈ ರಾಜ್ಯದ ಪ್ರಜೆಗಳಲ್ಲವೇ.?
ಕರಾವಳಿ ಕರ್ನಾಟಕವನ್ನು ಪೂರ್ತಿ ಕಡೆಗಣಿಸಿದ್ದು ಕೇವಲ 2 ಪೊಲೀಸ್ ಸ್ಟೇಷನ್‌ಗಳನ್ನು ನೀಡಿದ್ದೆ ಈ ಬಜೆಟ್‌ನ ಹೆಗ್ಗಳಿಕೆ. ರಾಜ್ಯದ ರೈತರು, ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ಯುವಕರು, ಬಡ ಜನತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಜನರನ್ನು ನಿರ್ಲಕ್ಷಿಸಿದ ಮತ್ತು ಕೇವಲ ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿದ ಬಜೆಟ್ ಇದಾಗಿದೆ ಎಂದು ಕ್ಯಾ. ಗಣೇಶ್ ಕಾರ್ಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.