ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆ ಲಾಬಿಗೆ ರಾಜ್ಯ ಸರಕಾರ ಮಣಿದಿದೆ
ಮಂಗಳೂರು: ಕರ್ನಾಟಕ ಸರಕಾರ ಇಂದು ಮಂಡಿಸಿರುವ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರ, ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಸಂಬಂಧ ಪಟ್ಟಂತೆ ಯಾವುದೇ ಘೋಷಣೆ ಮಾಡುದಿರುವುದು ಅಪಾರ ನಿರಾಸೆ ಮೂಡಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಗಣನೆ, ಸರಕಾರದ ಮಲತಾಯಿ ಧೋರಣೆ ಖಂಡನೀಯ ಎಂದು ‘ದ.ಕ. ಜಿಲ್ಲಾ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಅದಿವೇಶನದ ಸಂದರ್ಭ ದ.ಕ. ಜಿಲ್ಲೆಗೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆ ಮಂಜೂರು ಮಾಡುವ, ಸುರತ್ಕಲ್ ಮುಂತಾದೆಡೆ ಸಮುದಾಯ ಆಸ್ಪತ್ರೆ ಸ್ಥಾಪನೆ ಮಾಡುವ ಭರವಸೆ ನೀಡಲಾಗಿತ್ತು. ಹಾಗೆಯೆ ಪುತ್ತೂರಿಗೆ ಘೋಷಿಸಲಾಗಿರುವ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅನುದಾನ ಮಂಜೂರು ಮಾಡುವ, ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಪ್ರಾದೇಶಿಕ ಆಸ್ಪತ್ರೆಯಾಗಿಸಿ ಮೇಲ್ದರ್ಜೆಗೆ ಏರಿಸುವ ಹೇಳಿಕೆ ನೀಡಲಾಗಿತ್ತು. ಇದರಿಂದ ಕರಾವಳಿಯ ಜನತೆಯಲ್ಲಿ ಅಪಾರ ನಿರೀಕ್ಷೆಗಳು ಮೂಡಿದ್ದವು, ಬಜೆಟ್ ಮಂಡನೆಯನ್ನು ಜನತೆ ಕಾತುರದಿಂದ ಕಾಯುತ್ತಿದ್ದರು.
ಆದರೆ, ರಾಜ್ಯ ಸರಕಾರ ಇಂದು ಮಂಡಿಸಿದ ಬಜೆಟ್‌ನಲ್ಲಿ ಈ ಕುರಿತಾಗಿ ಯಾವುದೇ ಘೋಷಣೆಗಳನ್ನು ಮಾಡಲಾಗಿಲ್ಲ, ಅನುದಾನ ಮೀಸಲಿಡಲಾಗಿಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಗೆ ಮಾಡಿದ ಅನ್ಯಾಯ ಅಲ್ಲದೆ ಮತ್ತೇನಲ್ಲ. ಖಾಸಗಿ ಮೆಡಿಕಲ್ ಕಾಲೇಜುಗಳು, ಕಾರ್ಪೊರೇಟ್ ಆಸ್ಪತ್ರೆಗಳ ಏಕ ಸ್ವಾಮ್ಯದಿಂದ ಜಿಲ್ಲೆಯ ಜನಸಾಮಾನ್ಯರು ನಲುಗಿ ಹೋಗಿದ್ದಾರೆ. ಈ ಕುರಿತು ಕಳೆದ ಹಲವು ವರ್ಷಗಳಿಂದ ಸತತವಾಗಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ, ಇದೇ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನದಲ್ಲಿ ಆರೋಗ್ಯ ಸಚಿವರು ನೀಡಿದ ಭರವಸೆಗಳು ಜನತೆಯಲ್ಲಿ ಸಂತಸ ಹಾಗೂ ನಿರೀಕ್ಷೆಗಳನ್ನು ಮೂಡಿಸಿದ್ದವು. ಆದರೆ, ಅದೀಗ ಹುಸಿಯಾಗಿವೆ.
ರಾಜ್ಯದ ಹಲವು ಜಿಲ್ಲೆಗಳಿಗೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಗಳ ಘಟಕಗಳನ್ನು ಈ ಮೊದಲೇ ನೀಡಲಾಗಿದೆ. ಈ ಸಲದ ಬಜೆಟ್‌ನಲ್ಲಿ ಯಾದಗೀರ್, ಕೊಪ್ಪಳಗಳಿಗೆ ಹೊಸದಾಗಿ ಮಂಜೂರು ಮಾಡಲಾಗಿದೆ, ಕೆಲವು ಜಿಲ್ಲೆಗಳಿಗೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಘಟಕಗಳನ್ನು ಮೇಲ್ದರ್ಜೆಗೆ ಏರಿಸಲು ವಿಶೇಷ ಅನುದಾನ ಘೋಷಿಸಲಾಗಿದೆ. ಆದರೆ, ತೆರಿಗೆ ಸಂದಾಯದಲ್ಲಿ ಎರಡನೆ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಪೂರ್ತಿಯಾಗಿ ಕೈ ಬಿಡಲಾಗಿದೆ. ಸರಕಾರದ ಈ ನಿಲುವು ಖಂಡನೀಯ, ಇದು ಖಾಸಗಿ ಮೆಡಿಕಲ್ ಕಾಲೇಜುಗಳ ಲಾಬಿಗೆ ರಾಜ್ಯ ಸರಕಾರ ಮಣಿದಿರುವುದನ್ನು ಎತ್ತಿತೋರಿಸುತ್ತದೆ ಎಂದು ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ, ಸರಕಾರಿ ಆಸ್ಪತ್ರೆಗಳ ಬಲವರ್ಧನೆಯ ಬೇಡಿಕೆಗಳ ಮೇಲೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೋರಾಟ ಸಮಿತಿ ಎಚ್ಚರಿಸಿದೆ.