ರಥಬೀದಿ ಸರಕಾರಿ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಮೇಳ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ಮಾತನಾಡಿ, ಕ್ಯಾಂಪಸ್ ನಿಯೋಜನೆ ಡ್ರೈವ್‌ಗಳು ಶೈಕ್ಷಣಿಕ ಕಲಿಕೆ ಮತ್ತು ಉದ್ಯಮದ ಅವಶ್ಯಕತೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು, ವಿದ್ಯಾರ್ಥಿಗಳಿಗೆ ಆರಂಭಿಕ ವೃತ್ತಿಜೀವನದ ಅವಕಾಶಗಳು, ಆರ್ಥಿಕ ಸ್ವಾತಂತ್ರ್ಯ ಮತ್ತು ವೃತ್ತಿಪರ ಜಗತ್ತಿಗೆ ಒಡ್ಡಿಕೊಳ್ಳಲು ನಿರ್ಣಾಯಕವಾಗಿವೆ. ಅವು ಉದ್ಯೋಗದಾತರಿಗೆ ಕೌಶಲ್ಯಪೂರ್ಣ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ನೇರ ವೇದಿಕೆಯನ್ನು ಒದಗಿಸುತ್ತವೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕ ದೇವಿಪ್ರಸಾದ್, ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯ, ಬಿಬಿಎ ಉಪನ್ಯಾಸಕರಾದ ಅಕ್ಷತಾ, ಪ್ರಶಾಂತ್ ಕುಮಾರ್ ಮತ್ತು ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಮ್ಯಾ ಪ್ರಾರ್ಥಿಸಿದರು. ವೃತ್ತಿ ಮಾರ್ಗದರ್ಶನ-ಉದ್ಯೋಗ ನಿಯೋಜನೆ ಕೋಶ ಸಂಯೋಜಕಿ ಡಾ. ಮಾಲತಿ ಸ್ವಾಗತಿಸಿ, ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗ ಸಂಯೋಜಕಿ ಅರುಣಾ ಕುಮಾರಿ ನಿರೂಪಿಸಿದರು. ಅರ್ಥ ಶಾಸ್ತ್ರ ವಿಭಾಗ ಮುಖ್ಯಸ್ಥೆ ಶೋಭಾಮಣಿ ವಂದಿಸಿದರು.
ಈ ಉದ್ಯೋಗ ಮೇಳದಲ್ಲಿ ಯುನೈಟೆಡ್ ಟೊಯೋಟಾ, ಅಮೇಝಾನ್, ಸಹಯೋಗ್, ಕೋಜೇಂಟ್ ಇ-ಸರ್ವೀಸ್ ಲಿಮಿಟೆಡ್ ಮತ್ತು ಸೋಲಾರ ಆಕ್ಟಿವ್ ಫಾರ್ಮ ಸೈನ್ಸ್ ಕಂಪೆನಿಗಳು ವಿದ್ಯಾರ್ಥಿಗಳಿಗೆ ನೇಮಕಾತಿ ಸಂದರ್ಶನ ನಡೆಸಿದರು. ಸುಮಾರು 250 ವಿದ್ಯಾರ್ಥಿಗಳು ಉದ್ಯೋಗ ಆಕಾಂಕ್ಷಿಗಳಾಗಿ ಹೆಸರು ನೋಂದಾಯಿಸಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡರು.