ಎಲ್ಲರನ್ನು ಒಗ್ಗೂಡಿಸುವುದೇ ಕನಾ೯ಟಕದ ಸಂಸ್ಕೃತಿ: ಡಾ. ಶಿವರಾಜ್ ಕುಮಾರ್
ಆಳ್ವಾಸ್ ನಲ್ಲಿ ಸಾಂಸ್ಕೃತಿಕ ಸಾಂಪ್ರದಾಯಿಕ ದಿನಾಚರಣೆ
ಗೀತಾ ಶಿವರಾಜ್ ಕುಮಾರ್ ಮಾತನಾಡಿ ಇಂತಹ ಅದ್ಭುತ ಕಾರ್ಯಕ್ರಮಕ್ಕೆ ನಾವು ಬಾರದಿದ್ದರೆ ತಪ್ಪಾಗುತ್ತಿತ್ತು. ಎಲ್ಲ ಸಂಸ್ಕೃತಿ ಒಂದೆಡೆ ನೋಡುವುದೇ ನಮ್ಮ ಪುಣ್ಯ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರಿಗೆ, 'ನಿಮ್ಮ ಮಾತು' ಎಂದು ಶಿವರಾಜ್ ಕುಮಾರ್ ಕೇಳಿದಾಗ, 'ಇಂದು ನಿಮ್ಮ, ವಿದ್ಯಾರ್ಥಿಗಳ ದಿನ' ಎಂದು ಕೈ ಸನ್ನೆ ಮಾಡಿದರು. ಸಂಘಟನಾ ಶಿಸ್ತಿಗೆ ಅವರು 'ಭೇಷ್' ವ್ಯಕ್ತಪಡಿಸಿದರು.
ವಿದ್ಯಾರ್ಥಿ ಕೌಶಿಕ್ ಬರೆದ ಚಿತ್ರವನ್ನು ದಂಪತಿಗೆ ನೀಡಲಾಯಿತು.
ದಿನದ ಸ್ಪರ್ಧೆಗಳ ನಿರ್ಣಾಯಕರಾಗಿ ಬಂದ ಚಿತ್ರರಂಗದ ಪ್ರಮುಖರಾದ ನಟ ರಾಹುಲ್ ಅಮೀನ್, ಶೈಲಶ್ರೀ ಮೂಲ್ಕಿ, ದಿಶಾ ಶೆಟ್ಟಿ ಹಾಗೂ ಸಾಹಿಲ್ ರೈ, ಮಾಜಿ ಸಚಿವ ಅಭಯಚಂದ್ರ ಜೈನ್, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಸಮೂಹ ಸಂಸ್ಥೆಗಳ ಪ್ರಾಂಶುಪಾಲರುಗಳು ವೇದಿಕೆಯಲ್ಲಿದ್ದರು.
ನಿತೇಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.
ಕುಣಿದು ಕುಪ್ಪಳಿಸಿದ ಶಿವರಾಜ್ ಕುಮಾರ್!:
ನೆರೆದ ಜನಸ್ಥೋಮವನ್ನು ಕಂಡು ರೋಮಾಂಚನಗೊಂಡ ಶಿವರಾಜ್ ಕುಮಾರ್ ಹಾಡು ಹಾಡಿದರು. ಕುಣಿದು ಕುಪ್ಪಳಿಸಿದರು. ತಾಳ ಹಿಡಿದು, ‘ಕೋಲು ಮಂಡೆ ಜಂಗಮ ದೇವರು…..’ ಹಾಡಿ, ಹೆಜ್ಜೆ ಹಾಕಿದರು. ತಮ್ಮ ಆರಂಭಿಕ ‘ಆನಂದ್” ಸಿನಿಮಾದ ‘ಟುವ್ವಿ ಟುವ್ವಿ ‘ ಹಾಡಿನಿಂದ ಹಿಡಿದು ಪುನೀತ್ ರಾಜ್ ಕುಮಾರ್ ಅವರ ‘ ಬೊಂಬೆ ಹೇಳುತ್ತೈತೆ…. ನೀನೆ ರಾಜಕುಮಾರ… ವರೆಗಿನ ಹಾಡುಗಳನ್ನು ಹಾಡಿದರು. ಕಿಕ್ಕಿರಿದ ವಿದ್ಯಾರ್ಥಿ ಸಾಗರವು ಶಿಳ್ಳೆ, ಚಪ್ಪಾಳೆಗಳನ್ನು ನೀಡಿ ಪ್ರೋತ್ಸಾಹಿಸಿದರು.
ಟಟುವ್ವಿ ಟುವ್ವಿ ಟುವ್ವಿ,… , ಮುತ್ತಣ್ಣ ಪೀಪಿ ಊದುವ…,ಮಣಿ ಮಣಿ…, ಇವನಾರ ಮಗನೋ…, ಬೇಡುವನು ವರವನ್ನು ಜೋಗಿ…, ಯಾರೇ ಕೂಗಾಡಲಿ…, ಬೊಂಬೆ ಹೇಳುತ್ತೈತೆ… ಹಾಡುಗಳನ್ನು ಹಾಡಿ ಕುಣಿದರು.
ಕಲಾ ಪ್ರದರ್ಶನ:
ಮಹಾರಾಷ್ಟ್ರ, ಗುಜರಾತ್, ಈಶಾನ್ಯ ಭಾರತ, ಕೇರಳ, ಕರಾವಳಿ ಕರ್ನಾಟಕ, ಇತರೆ ಭಾರತ ಸೇರಿದಂತೆ ಆರು ತಂಡಗಳು ತಮ್ಮ ತವರೂರಿನ ಕಲಾ ಪ್ರಕಾರವನ್ನು ಪ್ರದರ್ಶಿಸಿದರು. ಸಾಂಸ್ಕೃತಿಕ ಕಲಾಕೃತಿಗಳಿಂದ ಸಿಂಗರಿಸಲ್ಪಟ್ಟ ಆವರಣದಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟ ವಿದ್ಯಾರ್ಥಿಗಳೇ ಪ್ರಮುಖ ಆಕರ್ಷಣೆ ಆಗಿದ್ದರು.
ಅಷ್ಟು ಮಾತ್ರವಲ್ಲ, ಕೇರಳ, ಮಹಾರಾಷ್ಟ್ರ, ಕರ್ನಾಟಕ, ಗುಜುರಾತ್ ಮತ್ತು ದೇಶದ ವಿವಿಧ ಭಾಗಗಳ ಆಹಾರ ಸವಿಯುವ ಸದಾವಕಾಶವು ವಿದ್ಯಾರ್ಥಿಗಳಿಗೆ ದೊರೆಯಿತು. ಕೇರಳ ಶೈಲಿಯ ಕಪ್ಪಾ ಮತ್ತು ಮೀನು ಸಾರು, ಇಡಿಯಪ್ಪಂ, ಪರಂಪುರಿ, ಕಟ್ಟನ್ ಚಾಯ, ಮಲಬಾರ ಬಿರಿಯಾನಿ, ತುಳುನಾಡಿನ ಕೋರಿ ರೂಟ್ಟಿ, ಕೋಳಿ ಸುಕ್ಕ, ಮೀನು ಪುಳಿಮುಂಚಿ, ಮೂಡೆ, ಗುಂಡ, ಹೋಳಿಗೆ ರಸಾಯನ, ಈಶಾನ್ಯ ಭಾರತದ ಪೈಕಿ ವಿಶೇಷವಾಗಿ ಮಣಿಪುರಿಯ ಸಿಂಗ್ಜು, ಕೆಲಿಚ್ಚನ್, ಇಮ್ಲಿ ಜ್ಯೂಸ್, ಮ್ಯಾಮೋಸ್, ಇತರ ಭಾರತದ ಹೈದರಾಬಾದ್ ಬಿರಿಯಾನಿ, ಮೊಹಬತ್ ಕಿ ಶರಬತ್, ಚೋಲೆ ಭತುರೆ – ಆಮ್ ರಾಸ್, ಕಚೋರಿ, ಮೊಮೊಸ್ ಮಹಾರಾಷ್ಟ್ರ ಮತ್ತು ಗುಜರಾತಿನ ಪಾನಿಪುರಿ, ಸೇವ್ ಪುರಿ, ಮಸಾಲಾ ಪುರಿ, ದಹಿ ಕಚೋರಿ ಮತ್ತಿತರ ಆಹಾರ ಖಾದ್ಯಗಳು ಬಾಯಿ ನೀರೂರಿಸಿದವು.


