ತುಳು ಭವನ: ಕಾರ್ಯಕ್ರಮಗಳಿಗೆ ಉಚಿತ ಸ್ಥಳಾವಕಾಶ ಲಭ್ಯ
Friday, March 27, 2026
ಮಂಗಳೂರು: ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಂಗಳೂರಿನ ಉರ್ವಸ್ಟೋರ್‌ನಲ್ಲಿರುವ ತುಳು ಭವನದ ಮೊದಲ ಮಹಡಿಯಲ್ಲಿರುವ ಡಾ. ವಾಮನ ನಂದಾವರ ಚಾವಡಿಯನ್ನು ಬಾಡಿಗೆ ರಹಿತವಾಗಿ ನೀಡಲು ನಿರ್ಧರಿಸಲಾಗಿದೆ.
ಪುಸ್ತಕ ಬಿಡುಗಡೆ, ನಾಟಕ, ಸಿನಿಮಾಗಳ ಪೋಸ್ಟರ್ ಬಿಡುಗಡೆ, ಸಾಹಿತ್ಯ ಸಂವಾದ, ವಿಚಾರಗೋಷ್ಠಿ, ನಾಟಕ ತರಬೇತಿ, ನಾಟಕ ಅಭ್ಯಾಸ ಮೊದಲಾದ ಕಾರ್ಯಕ್ರಮಗಳಿಗೆ ಸಿದ್ಧತಾ ಕೊಠಡಿ, ಸಣ್ಣ ವೇದಿಕೆ, ಮೈಕ್, ಭಾಷಣ ಪೀಠ ಹಾಗೂ 75 ಆಸನಗಳ ವ್ಯವಸ್ಥೆ ಒಳಗೊಂಡ ಚಾವಡಿಯನ್ನು ಉಚಿತವಾಗಿ ನೀಡಲಾಗುವುದು. ಕಾರ್ಯಕ್ರಮದಂದು ಶುಚಿತ್ವದ ಸಾಂಕೇತಿಕ ವೆಚ್ಚವನ್ನು ಸಂಘಟಕರು ಭರಿಸಬೇಕಾಗುತ್ತದೆ.
ಕಾರ್ಯಕ್ರಮ ಆಯೋಜಕರು ಕನಿಷ್ಠ ಒಂದು ವಾರಗಳ ಮುಂಚಿತವಾಗಿ ಅಕಾಡೆಮಿಗೆ ಲಿಖಿತವಾಗಿ ಕೋರಿಕೆ ಸಲ್ಲಿಸಬೇಕಾಗುತ್ತದೆ ಎಂದು ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.