ಅಮೇರಿಕನ್ ಸಾಮ್ರಾಜ್ಯಶಾಹಿಗಳ ಯುದ್ದಕೋರ ನೀತಿ ಖಂಡಿಸಿ ಹಾಗೂ ಶಾಂತಿಗಾಗಿ ಒತ್ತಾಯಿಸಿ ಪ್ರತಿಭಟನೆ
CITU ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡಿ, ಯುದ್ಧ ಹಾಗೂ ಸರ್ವನಾಶ ಎಂಬುವುದು ಬಂಡವಾಳಶಾಹಿ ಹಾಗೂ ಸಾಮ್ರಾಜ್ಯಶಾಹಿಗಳ ಉಸಿರು. ಅವುಗಳು ಇಲ್ಲದೆ ಹೋದರೆ ಇವೆರಡೂ ಶಕ್ತಿಗಳು ಕ್ಷಣಮಾತ್ರದಲ್ಲೇ ಸಾಯುತ್ತದೆ. ಅದಕ್ಕೆ ತನ್ನ ಅಸ್ತಿತ್ವಕ್ಕಾಗಿ ಜಗತ್ತಿನ ಹಲವೆಡೆ ಯುದ್ದಗಳನ್ನು ಪ್ರಚೋದಿಸಿ ಅಮಾಯಕ ಜನತೆಯ ಪ್ರಾಣಗಳನ್ನು ಬಲಿ ಪಡೆಯುತ್ತಿದೆ ಎಂದು ಹೇಳಿದರು.
DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರು ಮಾತನಾಡಿ, ಅಮೇರಿಕಾ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಧಾಳಿ ಜಗತ್ತಿನಾದ್ಯಂತ ವ್ಯಾಪಕ ಪರಿಣಾಮ ಬಿದ್ದಿದ್ದು, ಪೆಟ್ರೋಲ್ ಡೀಸೆಲ್, ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು ಜನಸಾಮಾನ್ಯರ ಬದುಕಂತೂ ತೀರಾ ಸಂಕಷ್ಟಕ್ಕೊಳಗಾಗಿದೆ ಎಂದು ಹೇಳಿದರು
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಖಜಾಂಚಿ ಯೋಗೀಶ್ ಜಪ್ಪಿನಮೊಗರುರವರು ಯುದ್ಧದ ಅಪಾಯಗಳನ್ನು ವಿವರಿಸುತ್ತಾ, ಅಲಿಪ್ತ ನೀತಿಯನ್ನು ಪ್ರತಿಪಾದಿಸುತ್ತಿದ್ದ ಭಾರತವನ್ನು ಅಮೇರಿಕಾದ ಕಿರಿಯ ಪಾಲುದಾರರನ್ನಾಗಿಸಿದ ನರೇಂದ್ರ ಮೋದಿ ಸರಕಾರ ದೇಶದ ಘನತೆ ಗೌರವವನ್ನು ಮಣ್ಣುಪಾಲು ಮಾಡಿದೆ.ದೇಶದ ಪ್ರತಿಯೊಂದು ಆಂತರಿಕ ವಿಷಯಗಳಿಗೆ ಮೂಗು ತೂರಿಸುವ ಅಮೇರಿಕಾದ ದುರ್ವರ್ತನೆಯಿಂದಾಗಿ ದೇಶದ ಪ್ರಧಾನಿ ಟ್ರಂಪೋ ಅಥವಾ ಮೋದಿಯೋ ಎಂಬಂತಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ, ರವಿಚಂದ್ರ ಕೊಂಚಾಡಿ, ಜಯಂತಿ ಶೆಟ್ಟಿ,ಆಶೋಕ್ ಶ್ರೀಯಾನ್, ಜಯಂತ ನಾಯಕ್,ಜಯಲಕ್ಷ್ಮಿ, ಭಾರತಿ ಬೋಳಾರ,DYFI ನಾಯಕರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗರೆ,ಮಹಿಳಾ ಸಂಘಟನೆಯ ಮುಖಂಡರಾದ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಆಶಾ ಬೋಳೂರು, ರೋಹಿಣಿ ಜಲ್ಲಿಗುಡ್ಡ,ಮಮತಾ, ಯೋಗಿತಾ ಮುಂತಾದವರು ಉಪಸ್ಥಿತರಿದ್ದರು.

