ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರು ಉದ್ಘಾಟಿಸಿ ಮಾತಾನಾಡಿ, ಪಕ್ಷದ ಸಿದ್ಧಾಂತ ಮತ್ತು ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ನಮ್ಮ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ, ಶಿಸ್ತು ಮತ್ತು ರಾಷ್ಟ್ರಭಕ್ತಿಯೊಂದಿಗೆ ಸಾಗಲು ಈ ಪ್ರಶಿಕ್ಷಣ ವರ್ಗವು ಭದ್ರ ಬುನಾದಿಯಾಗಲಿದೆ ಎಂದು ಹೇಳಿದರು.
ಹೊಸ ವಿಚಾರಗಳು, ಹೊಸ ಆಲೋಚನೆಗಳೊಂದಿಗೆ ನಮ್ಮ ‘ಫೌಂಡೇಶನ್’ ಅನ್ನು ಭದ್ರಪಡಿಸಿಕೊಳ್ಳೋಣ. ಈ ತರಬೇತಿಯಲ್ಲಿ ಪಡೆದ ಜ್ಞಾನವನ್ನು ಕೇವಲ ಇಲ್ಲಿಗೆ ಸೀಮಿತಗೊಳಿಸದೆ, ನಮ್ಮ ಕ್ಷೇತ್ರಗಳಲ್ಲಿ ಜಾರಿಗೆ ತರಬೇಕಾಗಿದೆ, ಸಂಘಟನೆಯೇ ಶಕ್ತಿ, ಶಿಸ್ತು ಅದರ ಉಸಿರು ಎಂಬುದನ್ನು ನಾವು ಮರೆಯಬಾರದು. ವಿಶೇಷವಾಗಿ 2047ರ ಹೊತ್ತಿಗೆ ‘ವಿಕಸಿತ ಭಾರತ’ ನಿರ್ಮಾಣದ ಗುರಿಯನ್ನು ತಲುಪಲು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಪ್ರಶಿಕ್ಷಣ ಮಹಾಭಿಯಾನ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಸಂಘಟನೆಯಲ್ಲಿ ಯಾವುದೇ ರಾಜಿ ಇಲ್ಲದೆ ಬದ್ಧತೆಯೊಂದಿಗೆ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಪಂಡಿತ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ರಾಜ್ಯ ಸಹ ಸಂಚಾಲಕ ವಿಕಾಸ್ ಪುತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ್ ಮಾಹಿತಿ ನೀಡಿದರು.
ಶಾಸಕರಾದ ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.
ಸೀತಾರಾಮ ಬೆಳಾಲು ಸ್ವಾಗತಿಸಿ, ಡಾ. ಮಂಜುಳಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಅರುಣ್ ಶೇಟ್ ವಂದೇಮಾತರಂ ಹಾಡಿದರು.