ಭೂಮಿ ಮುಂದಿನ ತಲೆಮಾರಿನ ಸ್ವತ್ತು: ಪ್ರೊ. ಜಯವಂತ ನಾಯಕ್
ಸರ್ ಸಿ.ವಿ. ರಾಮನ್ ಬೆಳಕಿನ ಚದುರುವಿಕೆಯ ಹೊಸ ವಿದ್ಯಮಾನ ಕಂಡು ಹಿಡಿದಿದ್ದಕ್ಕಾಗಿ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದಾರೆ. ಪ್ರಸ್ತುತ ಪೀಳಿಗೆಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಾಗ ಮುಂದಿನ ಪೀಳಿಗೆಯ ಅಗತ್ಯತೆಗಳಿಗೆ ಯಾವುದೇ ತೊಂದರೆಯಾಗದಂತೆ ಅಭಿವೃದ್ಧಿ ಹೊಂದುವುದು ಹಾಗೂ ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಕೂಡ ಸುಸ್ಥಿರ ಅಭಿವೃದ್ಧಿಯ ಭಾಗವಾಗಿದೆ. ನಮ್ಮ ದೇಶದ ಜಿಡಿಪಿ ಹೆಚ್ಚಳದಲ್ಲಿ ೪ನೇ ಸ್ಥಾನ ಪಡೆದುಕೊಂಡಿದೆ. ಆ ಕಾರಣಕ್ಕಾಗಿ ಎಲ್ಲರೂ ಶ್ರೀಮಂತರು ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲಿ ಅರ್ಧದಷ್ಟು ಪಾಲನ್ನು ಬಂಡವಾಳಶಾಹಿಗಳೇ ಬಾಚಿಕೊಳ್ಳುತ್ತಿರುವುದು ವಿಷಾದನೀಯ ಎಂದರು.
ಸಾಮಾನ್ಯ ಜನರು ಸಾಮರಸ್ಯ ಹಾಗೂ ಸಂತೋಷದಿಂದ ಬದುಕಬೇಕು. ಸಂಸ್ಕೃತಿ, ಭಾಷೆ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಆ ನಿಟ್ಟಿನಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್., ಪ್ರಶ್ನೆ ಕೇಳುವುದರಿಂದಲೇ ವಿಜ್ಞಾನ ಸೃಷ್ಟಿಯಾಗುತ್ತದೆ. ಸರ್ ಸಿ.ವಿ. ರಾಮನ್ ಅವರು ಪ್ರಶ್ನೆಗಳನ್ನು ಕೇಳುವುದರಿಂದಲೇ ವಿಜ್ಞಾನ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಯಿತು. ವಿಜ್ಞಾನ ನಿಸರ್ಗದ ಒಂದು ಭಾಗವಾಗಿದೆ. ಸಂಪನ್ಮೂಲಗಳನ್ನು ಹಾಳು ಮಾಡಿಕೊಂಡರೆ ಮುಂದಿನ ಪೀಳಿಗೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಯುವ ಜನತೆ ಅರಿತುಕೊಳ್ಳಬೇಕು. ಭೂಮಿ ಯಾರ ಸ್ವತ್ತೂ ಅಲ್ಲ ಎಂಬ ಸತ್ಯ ಅರಿತುಕೊಂಡಾಗ ಮಾತ್ರ ಮುಂದಿನ ಪೀಳಿಗೆ ಬದುಕಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ದರಾಜು ಎಂ.ಎನ್., ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ಪ್ರಸ್ತುತ ದಿನಮಾನಕ್ಕೆ ವಿಜ್ಞಾನದ ಪ್ರಸ್ತುತತೆ ಕುರಿತು ಮನವರಿಕೆ ಮಾಡಿಕೊಟ್ಟರು. ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿನಿ ಅಭಿರಾಮಿ ಪರಿಸರ ಅಧ್ಯಯನ ಪುಸ್ತಕದ ವಿಮರ್ಶೆ ನಡೆಸಿಕೊಟ್ಟರು. ಇದೇ ವೇಳೆ ಗ್ರಂಥಪಾಲಕಿ ಡಾ. ವನಜಾ, ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ಸೃಜನಾ ಸೇರಿದಂತೆ ನಾನಾ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
