ಪಾಲಡ್ಕ: ಕೇಮಾರಿನಲ್ಲಿ ದುರಸ್ಥಿ ಕಾಣದ ಪರಿಶಿಷ್ಟ ಜಾತಿ, ಪ. ಪಂಗಡ ಕಾಲನಿಗಳ ರಸ್ತೆಗಳು

ಪಾಲಡ್ಕ: ಕೇಮಾರಿನಲ್ಲಿ ದುರಸ್ಥಿ ಕಾಣದ ಪರಿಶಿಷ್ಟ ಜಾತಿ, ಪ. ಪಂಗಡ ಕಾಲನಿಗಳ ರಸ್ತೆಗಳು


ಮೂಡುಬಿದಿರೆ: ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲನಿಗೆ ಹೋಗುವ ರಸ್ತೆಗಳ ಡಾಂಬರು ಕಿತ್ತು ಹೋಗಿದ್ದು ವಾಹನ ಸಂಚಾರ ಮತ್ತು ಪಾದಾಚಾರಿಗಳ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಿವೆ. 


ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರು ನೆಲ್ಲಕ್ಕೆಯಲ್ಲಿ ಪರಿಶಿಷ್ಟ ಪಂಗಡದ ಕಾಲನಿಯಿದ್ದು ಇಲ್ಲಿ ಸುಮಾರು 25 ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಈ ಕಾಲನಿಗೆ ತಲುಪಬೇಕಾದ ರಸ್ತೆಯು ಕಡಿದಾಗಿದ್ದು ತೀರ ಇಕ್ಕಟ್ಟಿನ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿದ್ದು ಪಾಲಡ್ಕ ಗ್ರಾಮದ ಮಾವಿನಕಟ್ಟೆಯಿಂದ ಕಿನ್ನಿಪದವುವರೆಗೆ  ಹದಗೆಟ್ಟಿದೆ. 


ಕೇಮಾರಿನ ಪಲ್ಲದಮೇಲು ಎಂಬಲ್ಲಿರುವ ಪರಿಶಿಷ್ಟ ಜಾತಿಯ ಕಾಲನಿಗೆ ಹೋಗುವ ರಸ್ತೆಯ ಪರಿಸ್ಥಿತಿಯೂ ಇದೇ ರೀತಿಯಲ್ಲಿದ್ದು ಈ ಕಾಲನಿಯಲ್ಲಿ ಸುಮಾರು 20 ಮನೆಗಳಿವೆ. 

 5 ವಷ೯ಗಳ ಹಿಂದೆ ಈ ಕಾಲನಿಯ ರಸ್ತೆಯನ್ನು ಜಿ. ಪಂ ಮತ್ತು ತಾ. ಪಂ ಅನುದಾನದಲ್ಲಿ ದುರಸ್ಥಿ ಮಾಡಲಾಗಿತ್ತು ಆದರೆ ಇದೀಗ ರಸ್ತೆಗೆ ಹಾಸಿರುವ ಡಾಂಬರು ಜಲ್ಲಿ ಕಲ್ಲು ಸಮೇತ ಕಿತ್ತು ಬಂದಿದೆ.

 ಈ ಬಗ್ಗೆ ವಾಡ್೯ ಸದಸ್ಯರಾದ ಸುಕೇಶ್ ಶೆಟ್ಟಿ ಕೇಮಾರು ಮತ್ತು ಹರಿಣಿ ಅವರು ರಸ್ತೆಗಳಿಗೆ ಕಾಂಕ್ರಿಟೀಕರಣಗೊಳಿಸುವಂತೆ  ಪಂಚಾಯತ್ ಅಧ್ಯಕ್ಷರ ಮೂಲಕ ಶಾಸಕರಿಗೆ ಮನವಿಯನ್ನು ಸಲ್ಲಿಸಿದ್ದರು. 

ಇದರ ಜತೆಗೆ ಪಾಲಡ್ಕ ಗ್ರಾಮದ ಮುಡಾಯಿಬೆಟ್ಟು ಕಾಳು ಪಾಣರ ಅವರ ಮನೆ ಬಳಿಯಿಂದ ಹಿತ್ತಿಲು ಕುಟ್ಟಿ ಮೇರಾ ಅವರ ಮನೆ ತನಕ ಹೋಗುವ ರಸ್ತೆ, ಉಜಿಲ ಸುಧಾಕರ ಪೂಜಾರಿ ಅವರ ಮನೆ ಬಳಿಯಿಂದ ಜಿಡ್ಡು ಗೋಪಾಲ ಪೂಜಾರಿ ಅವರ ಮನೆ ಬಳಿಗೆ, ಕೇಮಾರು 5 ಸೆಂಟ್ಸ್ ಕಾನಿಯಿಂದ ಲ್ಯಾನ್ಸಿ ಡಿ'ಸೋಜಾ ಅವರ ಮನೆ ತನಕ ಹಾಗೂ ಕೇಮಾರು ಅಶ್ವತ್ಥಕಟ್ಟೆ ಬಳಿಯಿಂದ ಮಜಲಕೋಡಿ ರಸ್ತೆಗಳು ವಾಹನ ಸಂಚಾರಕ್ಕೆ ನಾಲಯಕ್ಕಾಗಿದ್ದು ಈ ರಸ್ತೆಗಳನ್ನೂ ಕಾಂಕ್ರಿಟೀಕರಣಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದರು. 

ಆದರೆ ಸರಕಾರವು ಈ ಬಾರಿಯ ಬಜೆಟ್ ನಲ್ಲಿ ಗ್ರಾಮ ಪಂಚಾಯತ್ ರಸ್ತೆಗಳ ಅಭಿವೃದ್ಧಿಗೆ ಅನುದಾನವನ್ನು ಮೀಸಲಿಟ್ಟಿಲ್ಲ ಇದರಿಂದಾಗಿ ರಸ್ತೆಗಳನ್ನು ದುರಸ್ಥಿಗೊಳಿಸುವುದು ಕಷ್ಟಸಾಧ್ಯವಾಗಿದೆ. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲನಿಯ ರಸ್ತೆಯನ್ನು ಸರಿಪಡಿಸದಿದ್ದರೆ ಮಳೆಗಾಲದಲ್ಲಿ ಜನರು ನಡೆದುಕೊಂಡು ಹೋಗಲು ಸಮಸ್ಯೆಯಾಗಬಹುದು. 

ಕ್ಷೇತ್ರದ ಶಾಸಕರು ಈ ರಸ್ತೆಗಳ ಅಭಿವೃದ್ಧಿಗೆ ಏನು ಕ್ರಮಕೈಗೊಳ್ಳುವರೋ ಎಂದು ಕಾದು ನೋಡಬೇಕಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article