ಶ್ರೀ ಮಹಾವೀರ ಕಾಲೇಜು: ಐಬಿಎಂ ಸಹಯೋಗದಲ್ಲಿ ಏಐ ತರಬೇತಿ
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ವಿದ್ಯಾರ್ಥಿಗಳಿಗೆ ಉತ್ತಮ ಮಟ್ಟದ ಏಐ ತರಬೇತಿ ನೀಡಲು ಐಬಿಎಂ ಮತ್ತು ಐಸಿಟಿ ಅಕಾಡೆಮಿ ನಮ್ಮ ಕಾಲೇಜಿನ ಜೊತೆ ಕೈ ಜೋಡಿಸಿರುವುದು ಸಂತಸದ ಸಂಗತಿ’ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಐಸಿಟಿ ಅಕಾಡೆಮಿಯ ಡಿಜಿಎಂ ವಿಷ್ಣುಪ್ರಸಾದ್, ‘ವಿವಿಧ ಕ್ಷೇತ್ರಗಳಲ್ಲಿ ಏಐ ತಜ್ಞರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸಂಬಂಧಿತ ಡಿಜಿಟಲ್ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವುದು ಈ ಕಾರ್ಯಕ್ರಮದ ಗುರಿ’ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ ಮಾತನಾಡಿ ಈ ತರಬೇತಿ ಕಾರ್ಯಕ್ರಮವನ್ನು ಐಸಿಟಿ ಅಕಾಡೆಮಿಯ ಅನುಭವಿ ತರಬೇತುದಾರ ಶಶಿಕಾಂತ್ ಎಚ್. ನಡೆಸುತ್ತಿದ್ದು, ಇದರ ಮೂಲಕ ವಿದ್ಯಾರ್ಥಿಗಳು ಏಐಯ ಪ್ರಾಯೋಗಿಕ ಬಳಕೆಗಳನ್ನು ಕಲಿತು ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಏಐನ ಮೂಲಭೂತ ತತ್ವಗಳು ಮತ್ತು ಪ್ರಾಯೋಗಿಕ ಬಳಕೆಗಳ ಕುರಿತು ಅರಿವು ನೀಡಲಾಗುತ್ತಿದೆ.
ವೇದಿಕೆಯಲ್ಲಿ ಐಸಿಟಿ ಅಕಾಡೆಮಿಯ ಪ್ರಾಜೆಕ್ಟ್ ಸಂಯೋಜಕ ಪವನ್ ಕಲ್ಯಾಣ್, ವಿದ್ಯಾರ್ಥಿ ಕ್ಶೇಮಪಾಲನಾಧಿಕಾರಿ ಪ್ರೊ. ಹರೀಶ್, ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಯೋಜಕಿ ಕೀರ್ತಳಾ, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ ಇವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶಾಶ್ವತಾ ಸ್ವಾಗತಿಸಿದರು. ಪ್ರತಿಷ್ಠಾ ಕಾಯ೯ಕ್ರಮ ನಿರೂಪಿಸಿದರು. ಶ್ರೇಷ್ಠಾ ಶೆಣೈ ವಂದಿಸಿದರು.