ಮಹಾವೀರ ಕಾಲೇಜು-ಎಂಐಟಿ ಒಪ್ಪಂದ: ಬಿಸಿಎ ವಿಭಾಗ ಬಲವರ್ಧನೆಗೆ ಕ್ರಮ-ಕೌಶಲವೃದ್ಧಿ, ಸಂಯುಕ್ತ ತಂಡ ಮಾರ್ಗದರ್ಶನ

ಮಹಾವೀರ ಕಾಲೇಜು-ಎಂಐಟಿ ಒಪ್ಪಂದ: ಬಿಸಿಎ ವಿಭಾಗ ಬಲವರ್ಧನೆಗೆ ಕ್ರಮ-ಕೌಶಲವೃದ್ಧಿ, ಸಂಯುಕ್ತ ತಂಡ ಮಾರ್ಗದರ್ಶನ


ಮೂಡುಬಿದಿರೆ: ಮಹಾವೀರ ಕಾಲೇಜು ಮತ್ತು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ನಡುವೆ ಮಹತ್ವದ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಮೂಲಕ ಮಹಾವೀರ ಕಾಲೇಜಿನ ಬಿಸಿಎ ವಿಭಾಗವನ್ನು ಬಲಪಡಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ.

 ಜೂನ್‌ನಿಂದ ಮಹಾವೀರ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮತ್ತು ಯಂತ್ರ ಕಲಿಕೆ(ಎಂಎಲ್) ವಿಷಯಗಳಲ್ಲಿ ವಿಶೇಷ ಬಿಸಿಎ ಕೋರ್ಸ್ ಆರಂಭಿಸಲಾಗುತ್ತದೆ. ಜತೆಗೆ ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿ ಮತ್ತು ಡೇಟಾ ಸೈನ್ಸ್ ಮೊದಲಾದ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಎಂಐಟಿ ಸಹಯೋಗದೊಂದಿಗೆ ಸಂಯುಕ್ತ ಪ್ರಮಾಣಪತ್ರ ಕಾರ್ಯಕ್ರಮ, ಇಂಟರ್ನ್‌ಶಿಪ್ ಹಾಗೂ ಮಾಸ್ಟರ್ ಕ್ಲಾಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಕೌಶಲವೃದ್ಧಿ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಮಹಾವೀರ ಕಾಲೇಜು ವಿದ್ಯಾರ್ಥಿಗಳು ಭವಿಷ್ಯಮುಖಿ ತಂತ್ರಜ್ಞಾನ ಕೌಶಲಗಳನ್ನು ಪಡೆದು ಹೆಚ್ಚಿನ ಉದ್ಯೋಗಾವಕಾಶ ಹೊಂದಲು ಸಾಧ್ಯವಾಗುತ್ತದೆ ಎಂದು ಈ ಒಪ್ಪಂದ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಮಹಾವೀರ ಕಾಲೇಜಿನ ಹಳೇ ವಿದ್ಯಾರ್ಥಿ ಸಂಜಯ್ ಭಟ್ ತಿಳಿಸಿದ್ದಾರೆ. 

ಮಾಹೆ ಬೆಂಬಲದಿಂದ ಮಹಾವೀರ ಕಾಲೇಜು ಶೈಕ್ಷಣಿಕ ಅಭಿವೃದ್ಧಿಯ ಮುಂದಿನ ಹಂತಕ್ಕೆ ಏರಲಿದೆ ಎಂದು ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ತಿಳಿಸಿದರು. 

ಈ ಒಪ್ಪಂದದಡಿ ಕೈಗೊಳ್ಳುವ ಯೋಜನೆಗಳಿಗೆ ಎಂಐಟಿ ಮತ್ತು ಮಹಾವೀರ ಕಾಲೇಜು ಪ್ರಾಧ್ಯಾಪಕರು ಹಾಗೂ ಪರಿಣಿತ ಹಳೇ ವಿದ್ಯಾರ್ಥಿಗಳ ಸಂಯುಕ್ತ ತಂಡ ಮಾರ್ಗದರ್ಶನ ನೀಡಲಿದೆ ಎಂದು ಮಹಾವೀರ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ.ರಾಧಾಕೃಷ್ಣ ತಿಳಿಸಿದರು. 

ಮಾಹೆ ಪ್ರೊ-ಚಾನ್ಸಲರ್ ಡಾ.ಎಚ್.ಎಸ್.ಬಳ್ಳಾಲ್, ಪ್ರೊ-ವೈಸ್ ಚಾನ್ಸಲರ್ ಡಾ.ನಾರಾಯಣ ಸಭಾಹಿತ್, ರಿಜಿಸ್ಟ್ರಾರ್ ಡಾ.ಪಿ.ಗಿರಿಧರ್ ಕಿಣಿ, ಎಜಿಇ ಆಡಳಿತಾಧಿಕಾರಿ ಡಾ.ಕೆ.ಶ್ರೀಧರ ರಂಗನಾಥ ಪೈ, ಎಂಐಟಿ ನಿರ್ದೇಶಕ ಡಾ.ಅನಿಲ್ ರಾಣಾ, ಎಂಐಟಿ ಸ್ಕೂಲ್ ಆಫ್ ಕಂಪ್ಯೂಟರ್ ಇಂಜಿನಿಯರಿಂಗ್ ಡೀನ್ ಡಾ.ರಾಧಿಕಾ ಪೈ, ಡಾ.ಚಿತ್ರಾ ಕೆ., ಡಾ.ರಾಮಕೃಷ್ಣ ಹೊಳ್ಳ, ಮಹಾವೀರ ಕಾಲೇಜು ಬಿಸಿಎ ವಿಭಾಗ ಮುಖ್ಯಸ್ಥೆ ಪ್ರೊ.ಕೀರ್ತಲಾ ಉಪಸ್ಥಿತರಿದ್ದರು.

ಮಹಾವೀರ ಕಾಲೇಜು ಮತ್ತು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಒಟ್ಟಾಗಿ ಗ್ರಾಮೀಣ ಪ್ರದೇಶದ ಪ್ರತಿಭೆಯನ್ನು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಸುವ ದಿಟ್ಟ ಹೆಜ್ಜೆ ಇಟ್ಟಿರುವುದು ಸಂತಸದ ಸಂಗತಿ. ಈ ಪ್ರಯತ್ನಕ್ಕೆ ಮಾಹೆ ಸಂಪೂರ್ಣ ಬೆಂಬಲ ನೀಡಲಿದೆ. -ಡಾ. ಎಚ್.ಎಸ್. ಬಳ್ಳಾಲ್, ಪ್ರೊ. ಚಾನ್ಸಲರ್ ಮಾಹೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article