ಸಂತ ಫಿಲೋಮಿನಾ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ
Thursday, March 26, 2026
ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಸಂಘ, ಮತ್ತು ಜೆಸಿಐ ಪುತ್ತೂರು ಜಂಟಿ ಆಶ್ರಯದಲ್ಲಿ ‘ವ್ಯಕ್ತಿತ್ವ ವಿಕಸನ’ ತರಬೇತಿ ಕಾರ್ಯಕ್ರಮ ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಜೆಸಿಐ ವಲಯ 15ರ ವಲಯ ತರಬೇತುದಾರರಾದ ಸುಹಾಸ್ ಎಪಿಎಸ್ ಮರಿಕೆಯವರು, ವಿದ್ಯಾರ್ಥಿಗಳನ್ನು ಹಲವು ಗುಂಪುಗಳಾಗಿ ಮಾಡಿ ‘ವ್ಯಕ್ತಿತ್ವವು ಹೂವು ಅರಳಿದಂತೆ ಅರಳಬೇಕಾದರೆ ನಮ್ಮ ನಡೆ ನುಡಿ ಹಾವ-ಭಾವ ವೇಷ-ಭೂಷಣ ಎಲ್ಲವೂ ಮುಖ್ಯವಾಗುತ್ತದೆ. ವಿದ್ಯೆಯೊಂದಿಗೆ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು, ಆತ್ಮವಿಶ್ವಾಸ ಹಾಗೂ ಸದಾ ನಗುಮೊಗದಿಂದ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತಾಗ ಸಮಾಜ ನಮ್ಮನ್ನು ಗೌರವಿಸುತ್ತದೆ ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೋ ಮಾತನಾಡಿ, ವ್ಯಕ್ತಿತ್ವದ ವಿಕಾಸಕ್ಕೆ ರೀಡಿಂಗ್, ರೈಟಿಂಗ್, ಕಮ್ಯುನಿಕೇಟಿಂಗ್, ಲಿಸನಿಂಗ್, ಸೆನ್ಸಿಟಿವಿಟಿ ಮತ್ತು ಕಾಮನ್ ಸೆನ್ಸ್ ಎಂಬ ಆರು ಸರಳ ಸೂತ್ರಗಳನ್ನು ಅಳವಡಿಸಿ ಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಜೆಸಿಐ ಅಧ್ಯಕ್ಷ ಜಿತೇಶ್ ರೈ, ಜೆಜೆಸಿ ಅಧ್ಯಕ್ಷೆ ದೀಕ್ಷಿತ, ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಮೊಳೆಯಾರ್, ಶೈಕ್ಷಣಿಕ ಕುಲ ಸಚಿವ ಡಾ. ನೋರ್ಬರ್ಟ್ ಮಸ್ಕರೇನಸ್, ಬಿಬಿಎ ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವೈಷ್ಣವಿ ರಶ್ಮಿತಾ ಮತ್ತು ಧನ್ಯಶ್ರೀ ಅವರು ಪ್ರಾರ್ಥನೆ ನೆರವೇರಿಸಿದರು. ವಿದ್ಯಾರ್ಥಿನಿ ಫಾತಿಮತ್ ಮಿಝ್ನಾ ಸ್ವಾಗತಿಸಿ, ಫಾತಿಮತ್ ರಬ್ಹಾನ ವಂದಿಸಿ, ರಶ್ಮಿತಾ ನಿರೂಪಿಸಿದರು.


