ಫಿಲೋಮಿನಾ ಕಾಲೇಜಿನಲ್ಲಿ ಶೈಕ್ಷಣಿಕ ಸಾಧಕರಿಗೆ ಸನ್ಮಾನ
Friday, March 27, 2026
ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಶೈಕ್ಷಣಿಕ ಸಾಧಕರಿಗೆ ಅಭಿನಂದನೆ ಸಲ್ಲಿಸುವ ಸನ್ಮಾನ ಕಾರ್ಯಕ್ರಮ ಶುಕ್ರವಾರ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕರಾದ ಅತಿ. ವಂ. ಲಾರೆನ್ಸ್ ಮಸ್ಕರೇನ್ಹಸ್ ಅವರು ಮಾತನಾಡಿ, ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳ ಪೋಷಕರು ನಿಮ್ಮನ್ನು ಸಮಾಜದ ಒಬ್ಬ ಉತ್ತಮ ವ್ಯಕ್ತಿಯಾಗಿ ನೋಡಲು ಬಯಸುತ್ತಾರೆ. ನಮ್ಮ ಅವಕಾಶಗಳನ್ನು ಸೂಕ್ತವಾಗಿ ಬಳಿಸಿಕೊಂಡು ನಿಮ್ಮ ಬದುಕಿನಲ್ಲಿ ಸಾಧನೆ ಮಾಡಿ. ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಪ್ರತಿಭೆ ಸಮಾಜ ಅಭಿವೃದ್ಧಿಗೆ ಪೂರಕವಾಗಿರಲಿ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಬಹುಮಾನ ಸಿಗದಿರಬಹುದು, ಆದರೆ ಸ್ಪರ್ಧೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಶಕ್ತಿಯ ಮೀರಿ ಪ್ರಯತ್ನ ಪಡುತ್ತಾರೆ. ನಾವೆಲ್ಲರೂ ಪ್ರಥಮ ಸ್ಥಾನ ಪಡೆಯಲು ಸದಾ ಪ್ರಯತ್ನಿಸಬೇಕು. ಆದರೆ ಈ ಸಾಧನೆ ಮಾಡಿದ ನಮ್ಮ ಸಹಪಾಠಿಗಳನ್ನು ಅಭಿನಂದಿಸುವುದು ಮತ್ತು ಅವರಿಗೆ ಶುಭ ಹಾರೈಸುವುದು ನಮ್ಮೆಲ್ಲರ ಕರ್ತವ್ಯ; ಅಂತಹ ಸದ್ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಕೆನರಾ ಕಾಲೇಜಿನ ಸಂಚಾಲಕರಾದ ಸಿಎ ಜಗನ್ನಾಥ್ ಕಾಮತ್ ಅವರು ಮಾತನಾಡಿ, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಿದಾಗ ಅವರ ಪೋಷಕರಿಗೆ ಎಲ್ಲರಿಗಿಂತ ಹೆಚ್ಚು ಸಂತೋಷವಾಗುತ್ತದೆ. ನಾವು ಸಾಧಕರನ್ನು ಸನ್ಮಾನಿಸಿದಾಗ, ಅದು ಇತರ ವಿದ್ಯಾರ್ಥಿಗಳಿಗೆ ‘ನಾವು ಕೂಡ ರ‍್ಯಾಂಕ್ ಪಡೆಯಬೇಕು’ ಎಂಬ ಪ್ರೇರಣೆಯನ್ನು ನೀಡುತ್ತದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯವು 2024-25ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಗಳಲ್ಲಿ ಕಾಲೇಜಿನ ಬಿಎಸ್ಸಿ ವಿಭಾಗದಲ್ಲಿ ಶ್ರೀದೇವಿ, ಆಯಿಷತ್ ಸಮ, ಬಿಎ ವಿಭಾಗದಲ್ಲಿ ಮಾದ್ರಿ ಅರ್ಚನಾ, ಬಿಬಿಎ ವಿಭಾಗದಲ್ಲಿ ಶಾಯಿರಿನ್ ಬಾನು ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದು, ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಡಾ. ರಾಧಾಕೃಷ್ಣ ಗೌಡ ಸ್ವಾಗತಿಸಿದರು. ಸ್ಪರ್ಲ್ ಫಿಯೋನಾ ಪಿರೇರಾ ವಂದಿಸಿದರು. ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಶ್ರೀವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಮಾಲಿನಿ, ಬಿಎ ವಿಭಾಗದ ಮುಖ್ಯಸ್ಥ ಡಾ ನೋರ್ಬರ್ಟ್ ಮಸ್ಕರೇನ್ಹಸ್, ಉಪನ್ಯಾಸಕ ಪ್ರಶಾಂತ್ ರೈ ಉಪಸ್ಥಿತರಿದ್ದರು.



