ತೊಕ್ಕೊಟ್ಟು ಫ್ಲೈ ಓವರಲ್ಲಿ ರೌಡಿ ಶೀಟರ್ ನ ಹತ್ಯೆ
Friday, March 27, 2026
ಉಳ್ಳಾಲ: ರೌಡಿಶೀಟರ್ ಓರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತೊಕ್ಕೊಟ್ಟು ಫ್ಲೈ ಓವರಲ್ಲಿ ಇಂದು ಮುಂಜಾನೆ ನಸುಕಿನ ವೇಳೆ ನಡೆದಿದೆ.
ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೇನ್ (46) ಯಾನೆ ಟ್ಯಾಬ್ಲೆಟ್ ಆರೀಫ್ ಕೊಲೆಯಾದ ರೌಡಿಶೀಟರ್.
ಮೃತ ಆರೀಫ್ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ. ಆರೀಫ್ ಧಕ್ಕೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದು ಇಂದು ಬೆಳಗ್ಗೆ ಬುಲೆಟಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಆತನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಕಾರಿನಿಂದ ಹಿಂಬಾಳಿಸಿದ ತಂಡವೊಂದು ಆರೀಫನನ್ನು ಕೊಲೆ ಮಾಡಿ ಪರಾರಿಯಾಗಿರುವುದಾಗಿ ಹೇಳಲಾಗಿದೆ.
ಕಳೆದ 2022 ರ ಮೇ ತಿಂಗಳಲ್ಲಿ ಆರೀಫ್ ಇದೇ ರೀತಿ ಬೆಳಿಗ್ಗೆ ಬೈಕಲ್ಲಿ ಧಕ್ಕೆಗೆ ತೆರಳುತ್ತಿದ್ದ ವೇಳೆ ಬಜಾಲ್ ನ ಟೊಪ್ಪಿ ನೌಫಾಲ್ ತಂಡವು ದಾಳಿ ನಡೆಸಿ ಚೂರಿ ಇರಿದು ಕೊಲೆಗೆ ಯತ್ನಿಸಿತ್ತು.
ವಿವಾಹಿತನಾಗಿರುವ ಆರೀಫ್ ಮೂಲತಃ ಕುದ್ರೋಳಿ ನಿವಾಸಿಯಾಗಿದ್ದು ಕಳೆದ ಏಳು ವರುಷದಿಂದ ಕುಟುಂಬ ಸಮೇತ ಅಜ್ಜಿನಡ್ಕ ,ಮುಳ್ಳುಗುಡ್ಡೆ ಎಂಬಲ್ಲಿ ಮನೆ ಮಾಡಿ ವಾಸವಿದ್ದ ಎಂದು ತಿಳಿದು ಬಂದಿದೆ. ಮೃತ ಆರೀಫ್ ಪತ್ನಿ ಮೂರು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾನೆ.
ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎನ್, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

