ಪುಸ್ತಕ ಅಲರ್ಜಿಯೊಂದಿಗೆ ಹುಟ್ಟಿದ ತಲೆಮಾರಿನಲ್ಲೊಂದು ವಾಸ್ತುಶಿಲ್ಪಿ
ನಮ್ಮ ತಲೆಮಾರಿನ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇರಲೇಬೇಕು ಎಂಬ ಅಲಿಖಿತ ಶಾಸನ ಬರೆದುಕೊಂಡು ಬಿಟ್ಟಿದ್ದಾರೆ. ರೀಲ್ಸ್ ಮಾಡುವುದು, ರಾತ್ರಿಯಿಡೀ ಫೋನ್ ನೋಡಿದ್ದರಿಂದ ಕ್ಲಾಸಿನಲ್ಲಿ ನಿದ್ದೆ ಹೊಡೆಯುವುದು ಬಿಟ್ಟು ಬೇರೇನನ್ನು ಮಾಡುತ್ತಿದ್ದೇವೆ ಎಂಬ ಜಿಜ್ಞಾಸೆ ಆಗಾಗ್ಗೆ ಮನಸ್ಸಿನಲ್ಲಿ ಹಾದುಹೋಗುತ್ತದೆ. ಬದುಕಿನಲ್ಲಿ ನಾವು ಕೊನೆಯದಾಗಿ ಏನನ್ನು ಬಿಟ್ಟು ಹೋಗುತ್ತೇವೆ ಎಂಬ ಆತಂಕವೊಂದು ಭೀಕರವಾಗಿ ಒಮ್ಮೆ ಕಾಡಿತು.
ಆಗೊಮ್ಮೆ ಕಾಗದ, ಪೆನ್ನನ್ನು ಪಕ್ಕಕ್ಕಿಟ್ಟು ತರಗತಿಯಲ್ಲಿರುವ ಮರದ ಡೆಸ್ಕನ್ನೊಮ್ಮೆ ದಿಟ್ಟಿಸಿ ನೋಡಿದ ನನಗೆ ಬಹಳ ಆಶ್ಚರ್ಯವೊಂದು ಕಾದಿತ್ತು. ಜಗತ್ತಿನಲ್ಲೇ ಹೆಸರುವಾಸಿಯಾದ ಆರ್ಕಿಟೆಕ್ಟ್ಗಳೆಲ್ಲರನ್ನೂ ಮೀರಿಸಿದ ಕೆತ್ತನೆಗಳು, ಅದೆಷ್ಟೋ ಸಾಹಿತ್ಯಗಳನ್ನು ರಚನೆ ಮಾಡಿ ಮರೆಯಾದ ಕವಿ, ಕವಿಯತ್ರಿಯರನ್ನು ಮೀರಿಸಿದ ಬರಹಗಳು. ಈಜಿಪ್ಟಿನ ನಾಗರಿಕತೆಯನ್ನೂ ಮೀರಿಸಿದ ಲಿಪಿ ನೋಡಿ ಕಣ್ಣು ತಂಪಾಯಿತು. ಇನ್ನು ಸ್ವಲ್ಪ ಆಳಕ್ಕೆ ಇಳಿದು ಸಂಶೋಧನೆ ಮಾಡಿದಾಗ ಅಮ್ಮ-ಅಪ್ಪ ಬೆಳಗ್ಗೆ ಬೈದ ಕೋಪಕ್ಕೆ ಕೊರೆದ ಕೊಳವೆ ಬಾವಿಗಳಿಗೆ ಕೊರತೆ ಇರಲಿಲ್ಲ.
ಬದುಕಿನಲ್ಲಿ ನಿಮ್ಮ ಗುರುತು ಬಿಟ್ಟು ಹೋಗಿ ಎಂದು ಅದ್ಯಾವುದೋ ಪುಣ್ಯಾತ್ಮ ಹೇಳಿದ್ದಾರೆ. ಆದರೆ ನಾವು ಮಾತ್ರ ನಮ್ಮ ಹೆಸರು ಕ್ಲಾಸ್ರೂಮಿನ ಬೆಂಚ್ಗಳಲ್ಲಿ ಅಜರಾಮರವಾಗುವಂತೆ ಮಾಡುವುದೇ ನಮ್ಮ ಧ್ಯೇಯವೆಂಬಂತೆ ತಮ್ಮ ಹೆಮ್ಮೆಯ ಹೆಸರು, ಇನಿಷಿಯಲ್ಗಳನ್ನು ಕೆತ್ತುವುದೇ ನಮ್ಮ ಕಾಯಕ. ಇನ್ನು ಅಲ್ಲಲ್ಲಿ ಮೈ ಮೆರೆತು ಕನಸು ಕಾಣುವ ಪ್ರಿಯಕರ, ಪ್ರೇಯಸಿಯರ ಹೆಸರು ಹಾರ್ಟ್ ಶೇಪ್ಗಳಲ್ಲಿ ರಾರಾಜಿಸುತ್ತಿರುವುದನ್ನು ನೋಡಿ ನನ್ನನ್ನೇ ನಾನು ಅರೆ ಕ್ಷಣ ಮರೆತುಹೋದೆ. ಡ್ರಾಯಿಂಗ್ ಕುಶಲ ಕಲೆಯನ್ನು ಮತ್ತೊಬ್ಬರಿಗೆ ತೋರಿಸಲು ಬಹಳ ಸೀರಿಯಸ್ ಆಗಿ ಬಿಡಿಸಿದ ಚಿತ್ರಗಳು ಪಕ್ಕದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದವು. ಚಿಕ್ಕದಾಗಿ ಬರೆದ ಡ್ರೀಮ್ ಸಿಗ್ನೇಚರ್ಗಳು, ಏನೂ ತೋಚದ ಮನಗಳು ಅತ್ಯಂತ ಪ್ರೊಫೆಷನಲ್ ಆಗಿ ಬಿಡಿಸಿರುವ ಚಿತ್ರಗಳು ನನ್ನ ಮನಸೂರೆಗೊಳಿಸಿತು. ಇದೆಲ್ಲದರ ಮಧ್ಯೆ ಎಲ್ಲವನ್ನೂ ಅರಿತ ಮಹಾತ್ಮರ ಕೆಲ ರೇಖೆಗಳು, ಇದ್ಕಕೂ ಮೊದಲು ಬಿಡಿಸಿದ ಕಲೆಗಳಿಗೆ ಏನೇನೋ ಸೈಡ್ ಎಫೆಕ್ಟ್ಗಳೂ, ಫಾಂಟ್ ಎಡಿಟ್ಗಳು, ಎಮೋಜಿಗಳು ಇಲ್ಲಿ ಏನುಂಟು ಏನಿಲ್ಲಾ ಎಂದೇ ಹೇಳಲು ಬರದಿರುವಷ್ಟು ಸಾಮ್ರಾಜ್ಯ ಬಹಳ ವಿಸ್ತಾರ ಹಾಗೂ ಆಳವಾಗಿದೆ. ಬುದ್ಧಿವಂತರು ಬರೆದಿರುವ ಕ್ವೆಶ್ಚನ್ ಆನ್ಸರ್ಗಳಿಗೂ
ಜಾಗವಿದೆ. ಶಿಲ್ಪಿಯಾದವನಿಗೆ ಕೆತ್ತನೆಯ ಟೂಲ್ಸ್ಗಳ ಅವಶ್ಯಕತೆ ಇರುವುದಿಲ್ಲ. ಆದರೆ, ಗುಂಪಿನಲ್ಲಿ ಗೋವಿಂದ ಎನ್ನುವಂತೆ ಬರುವ ಕಲೆಗಾರನೊಬ್ಬ ನಿದ್ದೆ ಹೊಡೆಯುತ್ತಿರುತ್ತಾನೆ.
ಈ ಡೆಸ್ಕಗಳ ಕಾಲ ಮುಗಿಯಿತೆಂದು ಜತನವಾಗಿ ಕಾಪಾಡಿಕೊಂಡು ಬಂದರೆ, ಬಹುಶಃ ಮುಂದಿನ ಆಲ್ಫಾ ತಲೆಮಾರು ಇವುಗಳನ್ನು ನಮ್ಮ ಹಿಂದಿನವರ ಆಸ್ತಿ ಎಂದು ಮ್ಯೂಸಿಯಂನಲ್ಲಿ ಇಡುವುದರಲ್ಲಿ ಯಾವುದೇ ಸಂಶಯವಿಲ್ಲ ಎನಿಸುತ್ತದೆ.
-ವೈಷ್ಣವಿ ರಾಜೇಶ್ ಕೆ.
ತೃತೀಯ ಪತ್ರಿಕೋದ್ಯಮ ವಿಭಾದ ವಿದ್ಯಾರ್ಥಿನಿ
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
