ಪೊಳಲಿಯಲ್ಲಿ ಕೊಡಿಚೆಂಡಿಗೆ ಚಾಲನೆ
ವಾರ್ಷಿಕ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಕೊಡಿ ಚೆಂಡು ಉತ್ಸವಕ್ಕೆ (ಮೊದಲ ದಿನದ) ಸೋಮವಾರ ದೇವಳದ ಮುಂಭಾಗದಲ್ಲಿರುವ ಗದ್ದೆಯಲ್ಲಿ ಚಾಲನೆ ನೀಡಲಾಯಿತು. ಕೊಡಿ ಚೆಂಡಿ ಉತ್ಸವದ ಬಳಿಕ ರಾತ್ರಿ ದೇವಳದಲ್ಲಿ ‘ಕುಮಾರ ತೇರು’ ಉತ್ಸವವು ನೆರವೇರಿತು. ಎ.10 ರಂದು ಕಡೇಚೆಂಡು ನಡೆಯಲಿದೆ.
ಚೆಂಡಿನ ಉತ್ಸವಕ್ಕೆ ಮೊದಲು ಪರಂಪರಾಗತವಾಗಿ ಚೆಂಡು ಕಟ್ಟುವ ಕಾಯಕವನ್ನು ಮಿಜಾರಿನ ಸಮಗಾರ ಮನೆತನದವರು ಮಾಡಿ ಶ್ರೀ ದೇವಳಕ್ಕೆ ಒಪ್ಪಿಸುತ್ತಾರೆ. ದೇವಿಗೆ ಪೂಜೆ ಆದ ಬಳಿಕ ಚೆಂಡನ್ನು ಹಿಡಿದು ಸರ್ವ ವಾದ್ಯಗಳೊಂದಿಗೆ ಪ್ರದಕ್ಷಿಣೆ ಬಂದು ಚೆಂಡಿನ ಗದ್ದೆಗೆ ತರಲಾಗುತ್ತಿದೆ. ದೇವಳದಿಂದ ಚೆಂಡನ್ನು ಗಾಣಿಗ ಮನೆತನದವರು ಹಿಡಿದುಕೊಂಡು ಬಂದು ಗದ್ದೆಯಲ್ಲಿ ಸಾಂಪ್ರದಾಯಿಕವಾಗಿ ಪ್ರಾರ್ಥಿಸಿ ಫರ್ದ ಖಂಡದವರಿಗೆ ನೀಡಿ ಚೆಂಡನ್ನು ಹಾರಿಸಲಾಗುತ್ತದೆ.
ಬಳಿಕ ಅಮ್ಮುಂಜೆ, ಮಳಲಿ ಪರಿಸರದ ಮಕ್ಕಳು ಚೆಂಡನ್ನು ಆಡುತ್ತಾರೆ. ಮೂರು ಬಾರಿ ಚೆಂಡನ್ನು ಆಡಲಾಗುತ್ತಿದ್ದು, ನಂತರ ಚೆಂಡನ್ನು ತಂದು ದೇವಳಕ್ಕೆ ಒಂದು ಸುತ್ತು ಹಾಕುವ ಮೂಲಕ ಸಂಪನ್ನಗೊಳ್ಳುತ್ತದೆ.
ಚಂಡ, ಮುಂಡರನ್ನು ಸಂಹರಿಸಿದ ಪ್ರತೀಕವಾಗಿ ಕ್ಷೇತ್ರದಲ್ಲಿ ಚೆಂಡಿನ ಉತ್ಸವ ನಡೆಸಲಾಗುತ್ತಿದೆ ಎಂಬ ಪ್ರತೀತಿ ಇದೆ. ಪೊಳಲಿ ಕ್ಷೇತ್ರದ ಒಂದು ತಿಂಗಳ ಜಾತ್ರೆಯಲ್ಲಿ ಐದುದಿನಗಳ ಚೆಂಡಿನ ಉತ್ಸವ ಜನಪ್ರಿಯವಾಗಿದ್ದು, ನೂರಾರು ಮಂದಿ ಭಕ್ತರು ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪುನೀತರಾಗುತ್ತಾರೆ.
ಈ ಸಂದರ್ಭ ದೇವಳದ ಪ್ರಧಾನ ಅರ್ಚಕರಾದ ಮಾಧವ ಭಟ್, ಹಿರಿಯ ಪ್ರಧಾನ ಅರ್ಚಕರಾದ ಕೆ. ರಾಮ್ ಭಟ್, ಪರಮೇಶ್ವರ ಭಟ್, ಅರ್ಚಕರಾದ ಪದ್ಮನಾಭ ಭಟ್, ಅನಂತಪದ್ಮನಾಭ ಭಟ್, ಅದರ್ಶ ಭಟ್, ದೇವಳದ ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ ಚೇರಾ ಸೂರ್ಯ ನಾರಾಯಣ ರಾವ್, ವಿವಿಧ ಗುತ್ತಿನವರು, ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಚಂದ್ರಮೋಹನ್ ಹಾಗೂ ದೇವಳದ ಪ್ರಮುಖರು ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.