ಜೂಜುರಹಿತ ಸಾಂಪ್ರದಾಯಿಕ ಕೋಳಿ ಅಂಕ ನಡೆಸಲು ಕಾನೂನಾತ್ಮಕವಾಗಿ ಅನುಮತಿ ನೀಡುವಂತೆ ಆಗ್ರಹಿಸಿ ಗೃಹಸಚಿವರಿಗೆ ಮನವಿ
ಬಂಟ್ವಾಳ: ತುಳುನಾಡಿನ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಧಾರ್ಮಿಕತೆಯೊಂದಿಗೆ ವಿಶೇಷ ನಂಟು ಹೊಂದಿರುವ ಜೂಜುರಹಿತ ಸಾಂಪ್ರದಾಯಿಕ ಕೋಳಿ ಅಂಕ ನಡೆಸಲು ಕಾನೂನಾತ್ಮಕವಾಗಿ ಅನುಮತಿ ನೀಡುವಂತೆ ಆಗ್ರಹಿಸಿ ಬಂಟ್ವಾಳ ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿನ ಬಹುತೇಕ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳು ಕೋಳಿ ಕುಂಟ ಹಾಕುವ ಮೂಲಕ ಪ್ರಾರಂಭವಾಗುವುದು ತುಳುನಾಡಿನ ಧಾರ್ಮಿಕ ರೂಢಿಯಾಗಿರುತ್ತದೆ.
ಈ ಹಿನ್ನೆಲೆಯ ಆರಂಭಗೊಳ್ಳುವ ಧಾರ್ಮಿಕ ಕಾರ್ಯಕ್ರಮಗಳು ಸಂಒನ್ನಗೊಂಡ ಬಳಿಕ ಊರ, ಪರವೂರ ಭಕ್ತಾಧಿಗಳು ಮತ್ತು ಜಾತ್ರೆಗೆ ಸಂಬಂಧಿಗಳ ಮನೆಗೆ ಬಂದಿರುವ ನೆಂಟಸ್ಥರೆಲ್ಲರು ಸೇರಿಕೊಂಡು ದೇವಸ್ಥಾನ ಅಥವಾ ದೈವಸ್ಥಾನಗಳ ಸಮೀಪ ಕೋಳಿ ಅಂಕಕ್ಕೆ ಗೊತ್ತುಪಡಿಸಿದ ಸ್ಥಳದಲ್ಲಿ ಸಾಂಪ್ರದಾಯಿಕವಾಗಿ ಕೋಳಿ ಅಂಕವನ್ನು ನಡೆಸಿಕೊಂಡು ಬರುತ್ತಿರುವುದು ಮತ್ತು ಸಂತೋಷದಿಂದ ಭಾಗಿಯಾಗುತ್ತಿರುವುದು ತುಳುನಾಡ ಜಿಲ್ಲೆಯ ಭಕ್ತರ ಧಾರ್ಮಿಕ ಕಟ್ಟು ಪಾಡಗಿರುತ್ತದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಕಾನೂನುನಲ್ಲಿ ಇದಕ್ಕೆ ಅವಕಾಶ ಇಲ್ಲದಿದ್ದರೂ ಧಾರ್ಮಿಕ ನಂಬಿಕೆಯ ವಿಚಾರದಲ್ಲಿ ಯಥಾವತ್ತಾಗಿ ಇಷ್ಟರವರೆಗೂ ನಡೆದುಕೊಂಡು ಬಂದಿರುವ ಕೋಳಿ ಅಂಕಗಳಿಗೆ ಇದೀಗ ದ.ಕ. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತಡೆಯಾಗಿದ್ದು, ಪರಿಣಾಮ ಕಳೆದೊಂದು ವರ್ಷದಿಂದ ಕೋಳಿ ಅಂಕಗಳು ಸ್ಥಗಿತವಾಗಿರುವುದರಿಂದ ಜಿಲ್ಲೆಯ ಧಾರ್ಮಿಕ ನಂಬಿಕೆಯುಳ್ಳ ಬಹುತೇಕ ಜನರ ಭಾವನೆಗಳಿಗೆ ಧಕ್ಜೆಯಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರ ವಿಶೇಷವಾದ ಧಾರ್ಮಿಕತೆಯ ನಂಟು ಹೊಂದಿರುವ ಕೋಳಿ ಅಂಕಗಳನ್ನು ಜೂಜುರಹಿತವಾಗಿ ನಡೆಸಲು ಕಾನೂನು ರೂಪಿಸಿಕೊಂಡು ವಿಶೇಷ ಆದೇಶ ಹೊರಡಿಸುವಂತೆ ಪ್ರಭಾಕರ ಪ್ರಭು ಅವರು ಗೃಹಸಚಿವರಲ್ಲಿ ಮನವಿ ಮೂಲಕ ಆಗ್ರಹಿಸಿದ್ದಾರೆ.