ಮಹಿಳೆ ಮೇಲೆ ಹಲ್ಲೆ, ಜೀವ ಬೆದರಿಕೆ
ಕಡಬ: ಕಳೆದ ಕೆಲವು ಸಮಯದಿಂದ ಪರಿಚಯವಿದ್ದು, ಅನ್ಯೋನ್ಯವಾಗಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಭಾಕರ ಪಿ. ಎಂಬಾತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸಂತ್ರಸ್ತೆಯು ಕಳೆದ ಮೂರು ವರ್ಷಗಳಿಂದ ತನ್ನ ಪತಿಯಿಂದ ದೂರವಾಗಿದ್ದು, ಮಗಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರು. ಈ ಅವಧಿಯಲ್ಲಿ ಅವರಿಗೆ ಆರೋಪಿ ಪ್ರಭಾಕರ ಪಿ. ಎಂಬುವವರ ಪರಿಚಯವಾಗಿತ್ತು. ಇಬ್ಬರ ನಡುವೆ ಸ್ನೇಹ ಹಾಗೂ ಅನ್ಯೋನ್ಯ ಬಾಂಧವ್ಯವಿತ್ತು ಎಂದು ತಿಳಿದುಬಂದಿದೆ.
ಏ.೩ರಂದು ಸಂತ್ರಸ್ತ ಮಹಿಳೆಯು ಆರೋಪಿಯೊಂದಿಗೆ ಮಾತನಾಡಲು ಆತನ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪ್ರಭಾಕರನು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸ ಭಾರತೀಯ ನ್ಯಾಯ ಸಂಹಿತೆ (BNS-2023) ಅಡಿಯಲ್ಲಿ ಕಲಂ 115(2), 352, 74, 351(2)ರಂತೆ ಅ.ಕ್ರ: 37/2026 ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.