ಖಾಸಗಿ ಬಸ್ ಕಂಡೆಕ್ಟರ್ ಪುತ್ರ ರಾಜ್ಯಕ್ಕೆ ಟಾಪರ್
ಪ್ರೀತಮ್ ಅವರು ಬಿದ್ಕಲ್‌ಕಟ್ಟೆ ನಿವಾಸಿ ಗಣಪತಿ ಪೂಜಾರಿ-ನಾಗರತ್ನಾ ದಂಪತಿಯ ಇಬ್ಬರ ಮಕ್ಕಳ ಪೈಕಿ ಹಿರಿಯ ಪುತ್ರ. ತಂದೆ ಗಣಪತಿ ಶ್ರೀ ಲಕ್ಷ್ಮೀ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಕಂಡಕ್ಟರ್. ತಾಯಿ ನಾಗರತ್ನಾ ಗೃಹಿಣಿ. ಎಲ್.ಕೆ.ಜಿ.ಯಿಂದಲೂ ಈತ ಮದರ್ ಥೆರೆಸಾ ಸಂಸ್ಥೆಯಲ್ಲಿ ಕಲಿಯುತ್ತಿದ್ದ.
ಪ್ರೀತಮ್ ಜಿ. ಪೂಜಾರಿ ಮಾಧ್ಯಮದವರೊಂದಿಗೆ ತನ್ನ ಖುಷಿಯನ್ನು ಹಂಚಿಕೊಂಡಿದ್ದಾನೆ. ಅಂದಿನ ಪಾಠವನ್ನು ಅಂದೇ ಮನನ ಮಾಡಿಕೊಳ್ಳುತ್ತಿದ್ದೆ. ಪಠ್ಯವನ್ನು ಓದಿ ಮುಗಿಸಲು ತಿಂಗಳ ಗುರಿಯನ್ನು ಇಟ್ಟುಕೊಂಡಿದ್ದೆ. ಪೋಷಕರು ಹಾಗೂ ವಿದ್ಯಾಸಂಸ್ಥೆಯವರ ಪ್ರೋತ್ಸಾಹ, ಮಾರ್ಗದರ್ಶನ ಸಾಧನೆಗೆ ಪ್ರೇರಣೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿಎಸ್ ಓದಿ ಜೆಇ ಪರೀಕ್ಷೆ ಬರೆಯುವ ಬಯಕೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯ ಸಂಸ್ಥಾಪಕರಾದ ಶಮಿತಾ ರಾವ್ ಬಲ್ಮಠ, ರೇನಿಟಾ ಲೋಬೋ ಮಾತನಾಡಿ, 28 ವರ್ಷಗಳ ಹಿಂದೆ ಹಳ್ಳಿಯಲ್ಲಿ ಕಟ್ಟಿದ ವಿದ್ಯಾಸಂಸ್ಥೆ ಇದೀಗ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಸಾರ್ಥಕತೆ ಲಭಿಸಿದೆ. ಶಾಲೆಯ ವಿದ್ಯಾರ್ಥಿ ಪ್ರೀತಮ್ ಪೂಜಾರಿ ಸಾಧನೆಯು ಸಂತಸ ತಂದಿದೆ. ಆತ ವಿದ್ಯಾಭ್ಯಾಸ ಹಾಗೂ ಇತರ ಚಟುವಟಿಕೆಯಲ್ಲಿ ಸದಾ ಚುರುಕಾಗಿದ್ದ. 625 ಅಂಕ ಪಡೆಯುವ ನಿರೀಕ್ಷೆಯೂ ನಮಗಿತ್ತು. ಆತನು ಪರಿಶ್ರಮದ ಜೊತೆಗೆ ಗುರುಹಿರಿಯರ ಜೊತೆ ವಿನಮೃತೆ ಹೊಂದಿದ್ದ. ಈ ಬಾರಿ ರಾಜ್ಯಮಟ್ಟದ ಕ್ವಿಜ್‌ನಲ್ಲಿ ಎರಡನೇ ಸ್ಥಾನಿಯಾಗಿದ್ದ ಎಂದರು.