ಕುಸಿತಗೊಂಡಿದ್ದ ಕಾಲುಸಂಕದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೋಟ್ಯಾನ್
Thursday, April 23, 2026
ಮೂಡುಬಿದಿರೆ: ಪುಚ್ಚೆಮೊಗರುವಿನ ಬಾವದಬೈಲಿನಲ್ಲಿ ಧಮ೯ದೈವದ ಭಂಡಾರ ತರುತ್ತಿದ್ದಾಗ ಕಾಲು ಸಂಕ ತುಂಡಾಗಿ ಬಿದ್ದು ಎಂಟು ಮಂದಿಗೆ ಗಾಯಗೊಂಡಿರುವ ಸ್ಥಳಕ್ಕೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಶ್ರೀಧರಮುಂದಲಮನಿ, ಪಂಚಾಯತ್ ಸದಸ್ಯ ಪ್ರದೀಪ್ ಮಾಜಿ ಸದಸ್ಯ ಯೋಗೀಶ್ ಶೆಟ್ಟಿ, ಬಿಜೆಪಿ ಮುಖಂಡ ರಂಜಿತ್ ಪೂಜಾರಿ ಈ ಸಂದಭ೯ದಲ್ಲಿದ್ದರು.
ಬುಧವಾರದಂದು ತಾಕೊಡೆ ಬರ್ಕೆ ಧರ್ಮನೇಮಕ್ಕೆ ಬಾವದಗುತ್ತುವಿನಿಂದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಸಾಗಿಸುತ್ತಿದ್ದ ವೇಳೆ ಕಾಲು ಸಂಕ ಮುರಿದು ಬಿದ್ದಿತ್ತು ಅವಘಡದಲ್ಲಿ ಸುನಿಲ್ ಶೆಟ್ಟಿ ಮುಕಾಲ್ದಿ, ಮಾರೂರು, ಲೋಕೇಶ್ ಭಂಡಾರಿ ಸೇರಿದಂತೆ ಪಲ್ಲಕ್ಕಿ ಹೊತ್ತವರು ಗಾಯಗೊಂಡಿದ್ದರು.
ಕಲ್ಲಿನ ಕಾಲು ಸಂಕ (ಬೀಮ್) ಪಲ್ಲಕ್ಕಿ ಹೊತ್ತವರ ಮೇಲೆ ಬಿದ್ದ ಪರಿಣಾಮ, ಪಲ್ಲಕ್ಕಿಯಲ್ಲಿದ್ದ ಮೊಗಮೂರ್ತಿ ಹಾಗೂ ಇತರ ಧಾರ್ಮಿಕ ಪರಿಕರಗಳು ಕೆಳಕ್ಕೆ ಬಿದ್ದಿವೆ.
ಈ ವೇಳೆ ಕೊಂಬು ಮತ್ತು ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ನಡೆಯುತ್ತಿತ್ತು.
ಘಟನೆ ತಿಳಿದ ಕೂಡಲೇ ಸ್ಥಳೀಯರು ತಕ್ಷಣ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ, ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಾಯ ಮಾಡಿದ್ದರು. ಗಾಯಾಳುಗಳು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ
