ಬೈಂದೂರು ಮನೆಯಿಂದ ನಗದು ಕಳವು
ಕುಂದಾಪುರ: ಬೈಂದೂರು ನಗರದ ಎಸ್‌ಬಿಐ ಬ್ಯಾಂಕ್ ಸಮೀಪದ ಮನೆಯೊಂದರಲ್ಲಿ ಲಕ್ಷಾಂತರ ರೂ. ಕಳವಾದ ಬಗ್ಗೆ ವರದಿಯಾಗಿದೆ.
ರಾಜಸ್ಥಾನ ಮೂಲದ ರಾವಲ್ ಸಿಂಗ್ (31) ಅವರು ನೀಡಿದ ದೂರಿನ ಮೇರೆಗೆ, ಅಪರಿಚಿತ ಕಳ್ಳರು ಮನೆ ಬೀಗ ಮುರಿದು ಒಳನುಗ್ಗಿ ಸುಮಾರು 6 ಲಕ್ಷ ರೂ. ನಗದು ಹಣ ಕಳವು ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ರಾವಲ್ ಸಿಂಗ್ ಅವರು ಬೈಂದೂರು ಎಸ್‌ಬಿಐ ಮತ್ತು ನಾಗೂರು ಕೆನರಾ ಬ್ಯಾಂಕ್ ಸಮೀಪ ಇಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಅಂಗಡಿ ನಡೆಸುತ್ತಿದ್ದು, ಕಳೆದ 2–3 ದಿನಗಳಿಂದ ಎಟಿಎಂ ಡೆಪಾಸಿಟ್ ಯಂತ್ರ ದೋಷದಿಂದ ಕಾರ್ಯನಿರ್ವಹಿಸದ ಹಿನ್ನೆಲೆ ಅಂಗಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆರು ಲಕ್ಷ ರೂಪಾಯಿ ನಗದು ಹಣವನ್ನು ಮನೆಯಲ್ಲಿ ಗೋಡ್ರೇಜ್ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು.
ಆದರೆ, ಏಪ್ರಿಲ್ 23ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯ ನಡುವಿನ ಅವಧಿಯಲ್ಲಿ, ಕಳ್ಳರು ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿ, ಲಾಕರ್‌ನಲ್ಲಿ ಇಡಲಾಗಿದ್ದ ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಬೈಂದೂರು ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.