ಏ.10-11ರಂದು ‘ಮಂಗಳೂರು ಫಿಸಿಯೋಕಾನ್-2026
ಮಂಗಳೂರು: ನಗರದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ಸೌತ್ ಕೆನರಾ ಫಿಸಿಯೋಥೆರಫಿ ಟೀಚರ್ಸ್ ಅಸೋಸಿಯೇಶನ್ ವತಿಯಿಂದ ಏ.10 ಮತ್ತು 11ರಂದು ಆಂತಾರಾಷ್ಟ್ರೀಯ ಭೌತ ಚಿಕಿತ್ಸೆಯ ಸಮ್ಮೇಳನ ‘ಮಂಗಳೂರು ಫಿಸಿಯೋಕಾನ್-2026’ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ನ ಅಧ್ಯಕ್ಷ ಡಾ.ಯು.ಟಿ. ಇಫ್ತಿಕರ್ ಫರೀದ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.10 ರಂದು ಬೆಳಗ್ಗೆ 9 ಗಂಟೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ್ ಉದ್ಘಾಟಿಸಲಿದ್ದು, ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
26ನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ಪಿಲಿಫೈನ್ಸ್, ಮಸ್ಕತ್, ದುಬೈ ಸೇರಿದಂತೆ ದೇಶ ವಿದೇಶಗಳ ಸುಮಾರು ಆರು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು.
ಕಾರ್ಯಕ್ರಮದಭಾಗವಾಗಿ ವಾರವಿಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಏಯ೬ರಂದು ಬೆಳಗ್ಗೆ 10 ಗಂಟೆಗೆ ನೀರುಮಾರ್ಗದ ಮಂಗಳಾ ಫಿಸಿಯೋಥೆರಪಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಉದ್ಘಾಟಿಸಲಿದ್ದಾರೆ.
100ಕ್ಕೂ ಅಧಿಕ ರಕ್ತದಾನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಏ.7ರಂದು ಬೆಳಗ್ಗೆ 10ಕ್ಕೆ ವೆನ್ಲಾಕ್ ಆಸ್ಪತ್ರೆಯಲ್ಲಿ ಹಣ್ಣು ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅದೇ ದಿನ ಬೆಳಗ್ಗೆ 9ಕ್ಕೆ ಮಂಗಳೂರಿನ ಯೇನೆಪೋಯ ವಿವಿಯಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ. ಏ.8 ರಂದು ಬೆಳಗ್ಗೆ 9 ಗಂಟೆಗೆ ಪೂರ್ವ ಸಮ್ಮೇಳನ ಕಾರ್ಯಗಾರ ನಗರದ 5 ಕಡೆಗಳಲ್ಲಿ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಫಿಸಿಯೋಕಾನ್ ನ ಖಜಾಂಚಿ ಡಾ.ವಿಜಯ್ ಪಿ., ಸಂಚಾಲಕರಾದ ಡಾ. ಮೊಹಮ್ಮದ್ ಸುಹೈಲ್, ಡಾ.ವೈಶಾಲಿ ಶ್ರೀಜಿತ್, ಜಂಟಿ ಕಾರ್ಯದರ್ಶಿ ಡಾ.ಭರತ್ ಉಪಸ್ಥಿತರಿದ್ದರು.