ಸರ್ಕಾರದಿಂದ ವಿವಿಧ ಯೋಜನೆ: ಪಿ.ಎಂ.ಮಾಲತೇಶ್
ಮಂಗಳೂರು: ರಾಜ್ಯ ಸರ್ಕಾರವು 2025 ಸೆಪ್ಟಂಬರ್‌ನಿಂದ ಕಾರ್ಮಿಕ ಇಲಾಖೆಯ ಮೂಲಕ ಅರ್ಚಕರು, ಪುರೋಹಿತರು, ಪ್ರಾಥಮಿಕ ಶಾಲಾ ಶಿಕ್ಷಕರು (ಮನೆ ಪಾಠ ಮಾಡುವವರು), ಮುದ್ರಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು, ಬೇಕರಿ ಮತ್ತು ಅಡಿಕೆ ಕೆಲಸ ಮಾಡುವವರು, ಕರಕುಶಲ ಕೆಲಸಗಾರರು, ಭೂರಹಿತ ಕೃಷಿ ಕಾರ್ಮಿಕರನ್ನು ಅಸಂಘಟಿತ ವರ್ಗಕ್ಕೆ ಸೇರಿಸಿರುವುದರಿಂದ ವಿಪ್ರ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಮಂಡಳಿಯ ನಿರ್ದೇಶಕ ಪಿ.ಎಂ. ಮಾಲತೇಶ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಸಾಂದೀಪನಿ ಶಿಷ್ಯ ವೇತನ, ವಿಪ್ರ ಸ್ವ ಉದ್ಯಮ ನೇರ ಸಾಲ, ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಚಾಣಕ್ಯ ಆಡಳಿತ ತರಬೇತಿ, ಆಚಾರ್ಯತ್ರಯರ ಜಯಂತಿ ಆಚರಣೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ಈಗಾಗಲೇ ಈ ನಿಟ್ಟಿನಲ್ಲಿ ನೋಂದಣಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಶಿವಮೊಗ್ಗದಲ್ಲಿ 250 ಮಂದಿ ಅರ್ಹ ಫಲಾನುವಿಗಳನ್ನು ಮಂಡಳಿ ಮೂಲಕ ನೋಂದಣಿ ಮಾಡಲಾಗಿದ್ದು, ಮಂಗಳೂರಿನಲ್ಲಿ ನೋಂದಣಿಯಾಗಿರುವ 100 ಮಂದಿಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಾರ್ಡುಗಳನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.
ಸಮುದಾಯದ ಆಸಕ್ತರಿಗೆ ತರಬೇತಿ ನೀಡಿ ಜಿಲ್ಲೆಯಾದ್ಯಂತ ಈ ಯೋಜನೆಯಡಿ ಇನ್ನಷ್ಟು ಮಂದಿಯಿಂದ ಅರ್ಜಿ ಸ್ವೀಕರಿಸಲಾಗುವುದು. ಈ ಕಾರ್ಡ್ ಮೂಲಕ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಲಭ್ಯವಾಗುವ ಸೌಲಭ್ಯಗಳು ಸಿಗಲಿವೆ ಎಂದವರು ಹೇಳಿದರು.
ಸುದ್ದಿಗೋಷ್ಠಿ ಪ್ರಮುಖರಾದ ನಮಿತಾ ಡಿ. ರಾವ್, ಶ್ರೀಧರ ಹೊಳ್ಳ, ರಾಘವೇಂದ್ರ ರಾವ್, ಎಚ್. ನಾಗೇಶ್ ಉಪಸ್ಥಿತರಿದ್ದರು.