12 ಮಂದಿ ಹರಿದಾಸರಿಂದ ಒಂದೇ ಕಥಾ ಭಾಗದ ಹರಿಕಥಾ ಪ್ರಸ್ತುತಿಯ ವಿಶಿಷ್ಟ ಪ್ರಯೋಗ
ಮಂಗಳೂರು: ಹರಿಕಥಾ ಕಲೆಯ ಅಗ್ರಮಾನ್ಯ ಪ್ರವರ್ತಕ ದಿ.ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಜಯಂತಿ ಆಚರಣೆಯ ಅಂಗವಾಗಿ ಹರಿಕಥಾ ರಂಗದಲ್ಲೊಂದು ವಿಶಿಷ್ಟ ಪ್ರಯೋಗ ನಡೆಸಲು ನಿರ್ಧರಿಸಲಾಗಿದೆ. ಇದೇ ಮೊದಲ ಬಾರಿಗೆ 12 ಮಂದಿ ಹರಿದಾಸರಿಂದ ಒಂದೇ ಕಥಾ ಭಾಗದ ಹರಿಕಥಾ ಪ್ರಸ್ತುತಿಯ ವಿಶಿಷ್ಟ ಪ್ರಯೋಗ ನಡೆಯಲಿದೆ ಎಂದು ಶೇಣಿ ಅವರ ಶಿಷ್ಯ, ಕಾರ್ಯಕ್ರಮ ಸಂಚಾಲಕ ಕೆ. ಮಹಾಬಲ ಶೆಟ್ಟಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ’ಡಾ. ಶೇಣಿ ಜಯಂತ್ಯುತ್ಸವ’ ಕಾರ್ಯಕ್ರಮ ಕಾಸರಗೋಡಿನ ಗುಡ್ಡೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.7 ಮತ್ತು 8ರಂದು ನಡೆಯಲಿದೆ. ಈ ಸಂದರ್ಭ ಈ ವಿಶಿಷ್ಟ ಪ್ರಯೋಗದ ಪ್ರಸ್ತುತಿಯಾಗಲಿದೆ. ಮಂಗಳೂರು ಹರಿಕಥಾ ಪರಿಷತ್, ಶೇಣಿ ಚಾರಿಟೆಬಲ್ ಟ್ರಸ್ಟ್, ಕೂಡ್ಲು ಗುಡ್ಡೆ ದೇವಸ್ಥಾನದ ಮಹಿಳಾ ಮಂಡಳಿ ಸಹಭಾಗಿತ್ವದಲ್ಲಿ, ಎಸ್.ಎಲ್ ಶೇಟ್ ಡೈಮಂಡ್ ಹೌಸ್ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಹರಿಕಥೆ ರಂಗದಲ್ಲಿ ಇದುವರೆಗೆ ಒಂದೇ ಕಥಾ ಭಾಗವನ್ನು 12 ಮಂದಿ ಹರಿದಾಸರು ಪ್ರಸ್ತುತಪಡಿಸಿದ ಇತಿಹಾಸ ಇಲ್ಲ. ಈ ವಿಶಿಷ್ಟ ಪ್ರಯೋಗವನ್ನು ಶೇಣಿ ಸಂಸ್ಮರಣೆಯ ಅಂಗವಾಗಿ ಆಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು.
‘ಸುಗ್ರೀವ ಸಖ್ಯ- ವಾಲಿ ಮೋಕ್ಷ’ ಕಥಾ ಭಾಗವನ್ನು ಪ್ರತಿ ಹರಿದಾಸರು ಒಂದೂವರೆ ಗಂಟೆ ಅವಧಿಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಏ.7ರಂದು ಬೆಳಗ್ಗೆ 9ರಿಂದ 10.30ರವರೆಗೆ ಸುಧಾಕರ ಕೋಟಿ ಕುಂಜತ್ತಾಯರು, 10.30ರಿಂದ 12ರವರೆಗೆ ಶೇಣಿ ಮುರಳಿ ಮಂಗಳೂರು, 12ರಿಂದ 1.30ರವರೆಗೆ ಶಂನಾಡಿಗ ಕುಂಬಳೆ, ಅಪರಾಹ್ನ 2ರಿಂದ 3.30ರವರೆಗೆ ಚಂದ್ರಕಾಂತ್ ಭಟ್, 3.30ರಿಂದ 5ರವರೆಗೆ ಜಯಾನಂದ ಕುಮಾರ್, 5ರಿಂದ 6.30ವರೆಗೆ ಡಾ.ಎಸ್.ಪಿ. ಗುರುದಾಸ್ ಹರಿಕತೆ ನಡೆಸಿಕೊಡಲಿದ್ದಾರೆ.
ಏ.8ರಂದು ಬೆಳಗ್ಗೆ 9ರಿಂದ 10.30ರವರೆಗೆ ಶೃದ್ಧಾ ನಾರ್ಯಪಳ್ಳ, 10.30ರಿಂದ 12ರವರೆಗೆ ತೋನ್ಸೆ ಪುಷ್ಕಳ್ ಕುಮಾರ್, 12ರಿಂದ 1.30ರವರೆಗೆ ಶ್ರೀಧರ ದಾಸ್ ಕುಂಭಾಶಿ, ಮಧ್ಯಾಹ್ನ 2ರಿಂದ 3.30ರವರೆಗೆ ರಾಮಚಂದ್ರ ಮಣಿಯಾಣಿ, 3.30ರಿಂದ 5 ಗಂಟೆಯವರೆಗೆ ಮಂಜುಳಾ ಜಿ. ರಾವ್ 5ರಿಂದ 6.30ವರೆಗೆ ದೇವಕಿತನಯ ಕೂಡ್ಲು ಅವರು ಇದೇ ಕಥಾ ಭಾಗವನ್ನು ಪ್ರಸ್ತುತಪಡಿಸುತ್ತಾರೆ ಎಂದರು.
ಏ. 8ರಂದು ಸಂಜೆ 6.40ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಮಾಲೀಕ ಎಂ. ರವೀಂದ್ರ ಶೇಟ್ ವಹಿಸಲಿದ್ದಾರೆ. ಮಧುಸೂಧನ ಆಯರ್, ಶೇಣಿ ವೇಣುಗೋಪಾಲ ಭಟ್, ರಾಮಚಂದ್ರ ಭಟ್ ಮಾಣಿಪಾಡಿ, ಶುಭೋದಯ ಕೂಡ್ಲು ಭಾಗವಹಿಸುತ್ತಾರೆ ಎಂದು ಮಹಾಬಲ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಯೋಜಕ ಎಂ.ರವೀಂದ್ರ ಶೇಟ್, ಕಾರ್ಯಕ್ರಮ ಸಂಚಾಲಕ ಸುಧಾಕರ ರಾವ್ ಪೇಜಾವರ, ನಾರಾಯಣ ರಾವ್, ಶೇಣಿ ಮುರಳಿ ಉಪಸ್ಥಿತರಿದ್ದರು.