ಆರೀಫ್ ಹತ್ಯೆಗೆ ಫೆ.13ರಂದೇ ಮೊದಲ ಯತ್ನ

ಆರೀಫ್ ಹತ್ಯೆಗೆ ಫೆ.13ರಂದೇ ಮೊದಲ ಯತ್ನ

ಮಂಗಳೂರು: ರೌಡಿ ಶೀಟರ್ ಕಿನ್ಯ ಅಜ್ಜಿನಡ್ಕ ನಿವಾಸಿ ಆರೀಫ್ ಹತ್ಯೆಗೆ ಆರೋಪಿಗಳು ಫೆಬ್ರವರಿ 13ರಂದೇ ಮೊದಲ ಯತ್ನ ನಡೆಸಿದ್ದರು ಎಂಬ ಆಘಾತಕಾರಿ ವಿಷಯ ಪೊಲೀಸ್ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಫೆಬ್ರವರಿ 13ರಂದು ಬೆಳ್ಳಂಬೆಳಿಗ್ಗೆ ಆರೋಪಿಗಳು ಆರಿಫ್‌ನನ್ನು ಹಿಂಬಾಲಿಸಿದ್ದರು. ಆತನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹೊಂಚು ಹಾಕಿದ್ದರು. ಆದರೆ ಆರಿಫ್‌ನನ್ನು ಹಿಂಬಾಲಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ನಡೆದ ಕಾರಣ, ಅಂದು ದಾಳಿ ನಡೆಸಲು ಆರೋಪಿಗಳಿಗೆ ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಬಳಿಕ ಮಾ.27ರಂದು ಬೆಳಗ್ಗೆ ದಕ್ಕೆ ಮೀನು ಮಾರುಕಟ್ಟೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಆರೀಫ್‌ನನ್ನು ತೊಕ್ಕೊಟ್ಟು ಫ್ಲೈ ಓವರ್ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು.

ಹೊಸಬರ ಕೈವಾಡ: ಮೊದಲ ಪ್ರಯತ್ನದಲ್ಲಿ, ಈಗಾಗಲೇ ಬಂಧಿತರಾಗಿರುವ ಆರೋಪಿಗಳಲ್ಲದೆ ಇನ್ನೂ ಕೆಲವರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಲಭ್ಯವಾಗಿದೆ.

ಮೊದಲ ಪ್ರಯತ್ನದಲ್ಲಿ ಭಾಗಿಯಾದ ಇತರ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಅವರನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು. ಕೊಲೆ ಪ್ರಕರಣದ ಆರೋಪಿಗಳಾದ ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಝ್ವಾನ್ ಹಾಗೂ ಇವರಿಗೆ ಕೊಲೆಕೃತ್ಯಕ್ಕೆ ಸಹಕರಿಸಿದ ಇರ್ಷಾದ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಎರಡನೇ ದಾಳಿಯಲ್ಲಿ ಭಾಗಿಯಾದವರು ಮತ್ತು ಮೊದಲ ಸಂಚಿನಲ್ಲಿ ಸಾಥ್ ನೀಡಿದವರ ನಡುವಿನ ಸಂಪರ್ಕದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು  ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article