ಕರಾವಳಿಯಲ್ಲಿ ಬಿಸಿಲ ಧಗೆ ಹೆಚ್ಚಳ: ಏಪ್ರಿಲ್ 28ರಿಂದ ಉತ್ತಮ ಬೇಸಗೆ ಮಳೆ ಸಾಧ್ಯತೆ
ಮಂಗಳೂರು: ಕರಾವಳಿ ಭಾಗದಲ್ಲಿ ಭಾನುವಾರವೂ ಬಿಸಿಲ ಧಗೆಯ ಆರ್ಭಟ ಮುಂದುವರಿದಿದ್ದು, ಜನಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅರಬ್ಬಿ ಸಮುದ್ರದಿಂದ ಬೀಸುತ್ತಿರುವ ಬಿಸಿಯಾದ ಗಾಳಿಯ ಪ್ರಭಾವದಿಂದಾಗಿ ತಾಪಮಾನದಲ್ಲಿ ಭಾರಿ ಏರಿಕೆಯಾಗಿದ್ದು, ಜನರು ಸೆಖೆಯಿಂದ ಹೈರಾಣಾಗಿದ್ದಾರೆ. ಮುಂದಿನ 1-2 ದಿನಗಳ ಕಾಲ ಇದೇ ರೀತಿಯ ಬಿಸಿ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾನುವಾರ ದ.ಕ ಜಿಲ್ಲೆಯಲ್ಲಿ ಗರಿಷ್ಠ 38.1ಡಿ.ಸೆ, ಕನಿಷ್ಠ 26.8ಡಿ.ಸೆ. ಉಷ್ಣಾಂಶಕ ಇತ್ತು. ಉಡುಪಿ ಜಿಲ್ಲೆಯಲ್ಲಿ ಗರಿಷ್ಠ 35.3ಡಿ.ಸೆ, ಕನಿಷ್ಠ 25.2 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಅರಬ್ಬಿ ಸಮುದ್ರದಿಂದ ದಡದತ್ತ ಬೀಸುತ್ತಿರುವ ಬಿಸಿಗಾಳಿಯು ಕರಾವಳಿಯ ತೇವಾಂಶವನ್ನು ಹೆಚ್ಚಿಸುತ್ತಿದ್ದು, ಇದರಿಂದಾಗಿ ಹಗಲಿನಲ್ಲಿ ಹೆಚ್ಚಿನ ಸೆಖೆ ಅನುಭವಕ್ಕೆ ಆಗಿದೆ. ಸೋಮವಾರ ಕಾಸರಗೋಡು ಸೇರಿದಂತೆ ಕರಾವಳಿಯ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದರೂ, ಭಾರಿ ಸೆಖೆಯ ಮುಂದುವರಿಕೆಯಾಗಲಿದೆ.
ಮಳೆಯ ನಿರೀಕ್ಷೆ
ಹವಾಮಾನ ಇಲಾಖೆಯ ಪ್ರಕಾರ, ಕರಾವಳಿಯಲ್ಲಿ ಏಪ್ರಿಲ್ 28 ರಿಂದ ಎರಡು ದಿನಗಳ ಕಾಲ ಉತ್ತಮ ಬೇಸಗೆ ಮಳೆ ಸುರಿಯುವ ಸಾಧ್ಯತೆ ಇದೆ. ಸೋಮವಾರ ಸಂಜೆಯ ವೇಳೆಗೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡದ ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯಿದೆ. ಕಾಸರಗೋಡು ಮತ್ತು ದಕ್ಷಿಣ ಕನ್ನಡದ ಉಳಿದ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ, ಅತಿಯಾದ ತೇವಾಂಶ ಮತ್ತು ಭಾರಿ ಸೆಖೆಯ ಕಾರಣದಿಂದಾಗಿ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅನಿರೀಕ್ಷಿತ ಮಳೆ ಬೀಳುವ ಸಾಧ್ಯತೆ ಇದೆ. ಏಪ್ರಿಲ್ 28ರಿಂದ ಕರಾವಳಿಯಲ್ಲಿ ಬೇಸಗೆಯ ಬಿಸಿಲಿಗೆ ತಣ್ಣೀರೆರಚುವಂತೆ ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಇದು ಜನಸಾಮಾನ್ಯರಿಗೆ ಕೊಂಚ ನಿರಾಳತೆ ನೀಡುವ ನಿರೀಕ್ಷೆಯಿದೆ.