ಎಪ್ರಿಲ್ 3,4,5: CITU ರಾಷ್ಟ್ರೀಯ,ರಾಜ್ಯ ನಾಯಕರು ಮಂಗಳೂರಿನಲ್ಲಿ
ಮಂಗಳೂರು: ದೇಶದ ಬಲಿಷ್ಠ ಕೇಂದ್ರ ಕಾರ್ಮಿಕ ಸಂಘಟನೆಯಾದ CITUನ ರಾಜ್ಯ ಪದಾಧಿಕಾರಿಗಳ ಸಭೆ ಹಾಗೂ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವು ನಾಳೆಯಿಂದ ಮೂರು ದಿನಗಳ ಕಾಲ ಮಂಗಳೂರಿನ ಸಂದೇಶ ಸಂಸ್ಥೆಯಲ್ಲಿ ಜರುಗಲಿದ್ದು,ಈ ಹಿನ್ನೆಲೆಯಲ್ಲಿ CITUನ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು CITU ಪ್ರಕಟಣೆಯೊಂದರಲ್ಲಿ ತಿಳಿಸಿದೆ.
CITU ರಾಷ್ಟ್ರೀಯ ಕಾರ್ಯದರ್ಶಿಗಳಾದ ಕೆ ಎನ್ ಉಮೇಶ್,ರಾಷ್ಟ್ರೀಯ ಉಪಾಧ್ಯಕ್ಷರಾದ ಮೀನಾಕ್ಷಿ ಸುಂದರಂ,ಎಸ್ ವರಲಕ್ಷ್ಮಿ,ರಾಜ್ಯದ ಕಾರ್ಮಿಕ ಚಳುವಳಿಯ ಹಿರಿಯ ನಾಯಕರಾದ ವಿಜೆಕೆ ನಾಯರ್, ರಾಜ್ಯದ ನಾಯಕರಾದ ಕೆ ಮಹಾಂತೇಶ್,ಸೈಯ್ಯದ್ ಮುಜೀಬ್,ಪ್ರತಾಪ್ ಸಿಂಹ,ಬಾಲಕೃಷ್ಣ ಶೆಟ್ಟಿ, ಸುನಂದಾ,ಮಾಲಿನಿ ಮೇಸ್ತಾ, ಗೋಪಾಲಗೌಡ,ಎಂ ಬಿ ನಾಡಗೌಡ,ಬಿ ವಿ ರಾಘವೇಂದ್ರ,ಆರ್ ಎಸ್ ಬಸವರಾಜ್,ಸತ್ಯಬಾಬು,ಶಾಂತ ಘಂಟೆ,ಕುಮಾರಿ ಸಿ,ಧರ್ಮೇಶ್,ಮಹೇಶ್ ಪತ್ತಾರ್ ಮುಂತಾದವರು ಭಾಗವಹಿಸಲಿದ್ದಾರೆ.
ದೇಶದ ಆಳುವ ವರ್ಗಗಳು ಕಾರ್ಮಿಕ ಕಾನೂನುಗಳನ್ನು ಇಲ್ಲವಾಗಿಸಿ,ಕಾರ್ಮಿಕ ವಿರೋಧಿ ಸಂಹಿತೆಗಳ ಜಾರಿಯ ಮೂಲಕ ಕಾರ್ಮಿಕ ವರ್ಗದ ಮೇಲೆ ಸವಾರಿ ನಡೆಸಲು ಹುನ್ನಾರ ನಡೆಸುತ್ತಿದೆ. ಇಂತಹ ಆಕ್ರಮಣಕಾರಿ ನೀತಿಗಳ ವಿರುದ್ಧ ಸಮರಶೀಲ ಹೋರಾಟವನ್ನು ರೂಪಿಸುವ ಮೂಲಕ ದುಡಿಯುವ ವರ್ಗದ ಚಳುವಳಿಯ ವಿಸ್ತರಣೆಗಾಗಿ ಎಪ್ರಿಲ್ 4 ಮತ್ತು 5ರಂದು ಎರಡು ದಿನಗಳ ಕಾಲ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ.ಇದಕ್ಕೆ ಸರಿಯಾದ ಮಾರ್ಗದರ್ಶನವನ್ನು ನೀಡಲು CITU ಕರ್ನಾಟಕ ರಾಜ್ಯ ಪದಾಧಿಕಾರಿಗಳ ಸಭೆಯು ನಾಳೆ ಮಂಗಳೂರಿನಲ್ಲಿ ಜರುಗಲಿದೆ
ಎಪ್ರಿಲ್ 4 ರಂದು ಬೆಳಿಗ್ಗೆ 10 ಗಂಟೆಗೆ ನಂತೂರಿನಲ್ಲಿರುವ ಸಂದೇಶ ಪ್ರತಿಷ್ಠಾನದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಜರುಗಲಿದ್ದು,ಜಿಲ್ಲೆಯ ವಿವಿಧ ವಿಭಾಗದ ಕಾರ್ಮಿಕರು, ಕಾರ್ಮಿಕ ಮುಖಂಡರು,ಪ್ರಗತಿಪರ ಚಿಂತಕರು, ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸ್ವಾಗತ ಸಮಿತಿಯ ಪ್ರದಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.