ರಥಬೀದಿ ಕಾಲೇಜಿನಲ್ಲಿ ಪಾಲಕರ ಸಭೆ ಮತ್ತು ಡ್ರಗ್ಸ್ ಜಾಗೃತಿ ಕಾರ್ಯಕ್ರಮ
Saturday, April 11, 2026
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಾಲಕರ ಸಭೆ ಮತ್ತು ಮಾದಕ ವ್ಯಸನದ ಬಗ್ಗೆ ಜಾಗೃತಿ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಬಂದರು ಆರಕ್ಷಕ ಠಾಣೆಯ ಉಪನಿರೀಕ್ಷಕ ಶೀತಲ್ ಅಲ್ಗೋಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾದಕದ್ರವ್ಯ ವ್ಯಸನ ತಡೆಯುವಲ್ಲಿ ಹೆತ್ತವರ ಮತ್ತು ಪೋಷಕರ ಪಾತ್ರದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ಕಾಲೇಜಿನಲ್ಲಿ ಕಲಿಕಾ ಸೌಲಭ್ಯಗಳ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆ, ವ್ಯಕ್ತಿತ್ವ ವಿಕಸನ ಮತ್ತು ಶಿಸ್ತುಬದ್ಧ ವಾತಾವರಣ ನಿರ್ಮಾಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದುಗ್ಗಪ್ಪ ಕಜೆಕಾರ್ ಸ್ವಾಗತಿಸಿದರು. ಪಾಲಕರ ಸಭೆಯ ಸಂಯೋಜಕರಾದ ನಾಗರಾಜ್ ಎಂ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ನಿವೇದಿತಾ ಸಿ. ಲೋಬೋ, ಕಾಲೇಜಿನಲ್ಲಿ ಜಾರಿಯಲ್ಲಿರುವ ವಿದ್ಯಾರ್ಥಿಗಳ ಮೆಂಟರಿಂಗ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕಿ ಮೈತ್ರಿ ಅವರು ನಿರ್ವಹಿಸಿದರು.
ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್ ವಂದಿಸಿ, ಸಹ ಸಂಯೋಜಕಿ ಡಾ. ಜ್ಯೋತಿ ಪ್ರಿಯಾ ನಿರೂಪಿಸಿದರು. ಸಾಮಾನ್ಯ ಸಭೆಯ ನಂತರ ಪಾಲಕರೊಂದಿಗೆ ಮಾರ್ಗದರ್ಶಿ ಶಿಕ್ಷಕರು ತರಗತಿವಾರು ಆಪ್ತ ಸಮಾಲೋಚನೆ ನಡೆಸಿದರು.
