ಸರಕಾರಿ ಆಸ್ಪತ್ರೆ-ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ

ಸರಕಾರಿ ಆಸ್ಪತ್ರೆ-ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಬಂಟ್ವಾಳ ತಾಲೂಕು ಆಸ್ಪತ್ರೆ, ಮೂಡುಬಿದಿರೆ, ಆರೋಗ್ಯ ಕೇಂದ್ರ, ವಿಟ್ಲ ಸಮುದಾಯ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳೊಂದಿಗೆ ಕರಾರು ಒಪ್ಪಂದ ನಡೆಸಲು ಸರಕಾರವು ಅನುಮೋದನೆಯನ್ನು ನೀಡಿರುತ್ತದೆ. ಕೆಲವು ಸಂಘಟನೆಗಳು ಈ ಕುರಿತು ನಕಾರಾತ್ಮಕ ವಿಷಯಗಳನ್ನು ಹರಡುತ್ತಿವೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ತಳಮಟ್ಟದಿಂದ ಬಲಪಡಿಸಲು ಹಾಗೂ ಗ್ರಾಮೀಣ ಭಾಗದ ಜನರಿಗೆ ವಿವಿಧ ತಜ್ಞ ವೈದ್ಯರ ಸೇವೆಗಳನ್ನು ನೀಡಲು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ವಿಸ್ತರಿಸುವ ಸಲುವಾಗಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳೊಂದಿಗೆ ಮಹತ್ವದ ಒಪ್ಪಂದ/ ಒಡಂಬಡಿಕೆ (MoU) ಮಾಡಿಕೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಈ ಮಹತ್ವಾಕಾಂಕ್ಷಿ ಒಪ್ಪಂದದ ಅಡಿಯಲ್ಲಿ, ಖಾಸಗಿ ವೈದ್ಯಕೀಯ ಕಾಲೇಜುಗಳು ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ನುರಿತ ತಜ್ಞರ ಸೇವೆಯನ್ನು, ಅರೆ ವೈದ್ಯಕೀಯ ಸಿಬ್ಬಂದಿಗಳ ಸೇವೆಯನ್ನು, ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ಹಾಗೂ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಒದಗಿಸಲಿದ್ದು, ಇದರ ನೇರ ಲಾಭ ಜನ ಸಾಮಾನ್ಯರಿಗೆ ಸಿಗಲಿದ್ದು. ಸ್ಥಳೀಯ ಮಟ್ಟದಲ್ಲೇ ತಜ್ಞ ವೈದ್ಯರ ಚಿಕಿತ್ಸೆ ಮತ್ತು ಸುಧಾರಿತ ರೋಗನಿರ್ಣಯ ಸೌಲಭ್ಯಗಳು ಉಚಿತವಾಗಿ ದೊರೆಯಲಿರುತ್ತದೆ. ಒಡಂಬಡಿಕೆಗೆ ಒಳಪಡುವ ಆರೋಗ್ಯ ಕೇಂದ್ರದ ಅಧಿಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಪರ್ದಿಯಲ್ಲಿದ್ದು, ಖಾಸಗಿ ಸಂಸ್ಥೆಯವರು ಕೇವಲ ವೈದ್ಯಕೀಯ ಸೇವೆಯನ್ನು ನೀಡುದಾಗಿರುತ್ತದೆ. ಇಲಾಖೆಯ ಯಾವುದೇ ಸಂಸ್ಥೆ/ ಸ್ವತ್ತುಗಳನ್ನು ಮಾರಾಟ ಮಾಡುತ್ತಿರುವುದಿಲ್ಲ.

ಈಗಾಗಲೇ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಮತ್ತು ಸರಕಾರಿ ಲೇಡಿಗೋಷನ್ ಆಸ್ಪತ್ರೆಯು ಕೆ.ಎಂ.ಸಿ ವೈದ್ಯಕೀಯ ಆಸ್ಪತ್ರೆಯೊಂದಿಗೆ, MOU ಮಾಡಿಕೊಂಡಿದ್ದು, ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯನ್ನು ರಾಜ್ಯದ ಯಾವುದೇ ಇತರೆ ಜಿಲ್ಲಾ ಆಸ್ಪತ್ರೆಗಳಿಗೆ ಹೋಲಿಸಿದ್ದಲ್ಲಿ, ಉತ್ತಮ ಗುಣಮಟ್ಟದ ಸೂಪರ್ ಸ್ಪೇಷಾಲಿಟಿ ಮಟ್ಟದ ಆಸ್ಪತ್ರೆಗಳಲ್ಲಿ ಲಭ್ಯವಿರುವ ನುರಿತ ತಜ್ಞರ ಮತ್ತು ಇತರೆ ಅರೆ ವೈದ್ಯಕೀಯ ಸಿಬ್ಬಂದಿಗಳ ಸೇವೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಲಾಗುತ್ತಿದೆ. ಖಾಸಗಿ ವಲಯದಲ್ಲಿ ನುರಿತ ತಜ್ಞರ ಸೇವೆಯನ್ನು ದುಬಾರಿ ಮೊತ್ತವನ್ನು ಪಾವತಿಸಿ ಪಡೆಯಬೇಕಾಗಿದ್ದು, ಆದರೆ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ಸಾರ್ವಜನಿಕರು ಉಚಿತವಾಗಿ ಸೇವೆಯನ್ನು ಪಡೆಯಬಹುದಾಗಿರುತ್ತದೆ. ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಗೆ ನೆರೆಯ 10 ರಿಂದ 15 ಜಿಲ್ಲೆಗಳಿಂದಲ್ಲದೆ ನೆರೆಯ ಕೇರಳ ರಾಜ್ಯದಿಂದಲೂ ರೋಗಿಗಳು ಸೇವೆಯನ್ನು ಪಡೆಯುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಹೃದ್ರೋಗಕ್ಕೆ ಸಂಬಂಧಪಟ್ಟ ಕ್ಯಾತ್‌ಲ್ಯಾಬ್ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಇದುವರೆಗೆ 741 ರೋಗಿಗಳು ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ಇದರ ಪ್ರಯೋಜನವನ್ನು ಪಡೆದಿರುತ್ತಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಉಳ್ಳಾಲ ಆರೋಗ್ಯ ಕೇಂದ್ರವು ನಗರ ಸಮುದಾಯ ಆರೋಗ್ಯ ಕೇಂದ್ರವಾಗಿ ಕಾರ್ಯಾಚರಿಸುತ್ತಿದ್ದು, ಖಾಸಗಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ನಡೆಸುವ ಮೊದಲು ಆಸ್ಪತ್ರೆಯಲ್ಲಿ ಪ್ರತಿದಿನ ಸರಾಸರಿ 46 ರೋಗಿಗಳು ಇದ್ದು, ಪ್ರಸ್ತುತ ಎಲ್ಲಾ ತಜ್ಞರ ಸೇವೆಯು ಲಭ್ಯವಿದ್ದು, ಪ್ರತಿದಿನ ಸರಾಸರಿ 400 ರಿಂದ 500 ರೋಗಿಗಳು ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ.

ಪ್ರಸ್ತುತ ಚಾಲ್ತಿಯಲ್ಲಿರುವ ಖಾಸಗಿ-ಸರಕಾರಿ ಆಸ್ಪತ್ರೆಗಳ ಒಡಂಬಡಿಕೆಯಿಂದಾಗಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರವು ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಬಂಟ್ವಾಳ ತಾಲೂಕು ಆಸ್ಪತ್ರೆ, ಮೂಡುಬಿದಿರೆ, ಆರೋಗ್ಯ ಕೇಂದ್ರ, ವಿಟ್ಲ ಸಮುದಾಯ ಆಸ್ಪತ್ರೆಗಳನ್ನು ಕೂಡಾ ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆಯನ್ನು ನಡೆಸಿ, ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಉಚಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article