ಮಾರಕಾಸ್ತ್ರದಿಂದ ದಾಳಿ ನಡೆಸಲು ಯತ್ನ: ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
ಮಂಗಳೂರು: ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಲು ಬಂದಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ತಡರಾತ್ರಿ ಜೋಕಟ್ಟೆ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮೂಲತಃ ವಾಮಂಜೂರು, ಪ್ರಸ್ತುತ ಜೋಕಟ್ಟೆಯಲ್ಲಿ ವಾಸವಾಗಿದ್ದ ನವೀನ್ ಪೂಜಾರಿ ಬಂಧನಕ್ಕೊಳಗಾದ ಆರೋಪಿ.
ಘಟನೆಯ ವಿವರ:
ವಾಮಂಜೂರಿನ ನವೀನ್ ಪೂಜಾರಿಗೆ ವಿವಾಹವಾಗಿದ್ದು, 8 ವರ್ಷದ ಮಗನಿದ್ದಾನೆ. ಸದ್ಯ ದಂಪತಿಯ ವಿವಾಹ ವಿಚ್ಛೇದನವಾಗಿದೆ.
ಈ ನಡುವೆ ನವೀನ್‌ನ ವಿಚ್ಛೇದಿತ ಪತ್ನಿ ಪಡೀಲ್‌ನ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲೇ ಮೆಕ್ಯಾನಿಕ್ ಆಗಿರುವ ದೇವಿ ಪ್ರಸಾದ್ ಎಂಬಾತನ ಜೊತೆ ಸುತ್ತಾಡುತ್ತಿದ್ದಾರೆ ಎಂದು ಆರೋಪಿಸಿ, ಶುಕ್ರವಾರ ರಾತ್ರಿ ಮಾರಕಾಸ್ತ್ರದೊಂದಿಗೆ ದೇವಿ ಪ್ರಸಾದ್ ಆಚಾರ್ಯ ಎಂಬವರ ಮನೆಗೆ ಬಂದು ಜಗಳ ಮಾಡಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ದೇವಿ ಪ್ರಸಾದ್ ಆಚಾರ್ಯ 112ಕ್ಕೆ ಕರೆ ಮಾಡಿದಾಗ ನವೀನ್ ಹೆದರಿ ಅಲ್ಲಿಂದ ಪರಾರಿಯಾಗಿದ್ದಾನೆ.
ಪರಾರಿಯಾಗುವ ಭರದಲ್ಲಿ ನವೀನ್ ಪೂಜಾರಿ ಜೋಕಟ್ಟೆ ಪಂಚಾಯತ್ ಬಳಿ ದ್ವಿಚಕ್ರವಾಹನದಿಂದ ಬಿದ್ದಿದ್ದಾನೆ. ಅದನ್ನು ಕಂಡ ಸ್ಥಳೀಯರು ಆತನನ್ನು ರಕ್ಷಿಸಲು ತೆರಳಿದಾಗ ದ್ವಿಚಕ್ರವಾಹನದಲ್ಲಿ ಮಾರಕಾಸ್ತ್ರ ಕಂಡು ಹೆದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪಣಂಬೂರು ಪೊಲೀಸರು ನವೀನ್ ಪೂಜಾರಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ದೇವಿ ಪ್ರಸಾದ್ ಆಚಾರ್ಯ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.