ಹೊಲಿಗೆ ಯಂತ್ರ ವಿತರಣೆ
Tuesday, April 21, 2026
ಮಂಗಳೂರು: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ 2024-25ನೇ ಸಾಲಿನ ‘ಹೊಲಿಗೆ ಯಂತ್ರ ವಿತರಣೆ ಯೋಜನೆ’ಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಇಂದು ನಡೆಯಿತು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಆಯ್ಕೆಯಾದ ಒಟ್ಟು 20 ಹಿಂದುಳಿದ ವರ್ಗಗಳ ಬಡ ಕುಟುಂಬಗಳ ಮಹಿಳೆಯರಿಗೆ, ಇಂದು ಬೆಳಗ್ಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸರ್ಕಾರದ ಕಲ್ಯಾಣ ಯೋಜನೆಗಳು ನಿಜವಾದ ಅರ್ಹರಿಗೆ ತಲುಪಬೇಕು ಎಂಬುದು ನಮ್ಮ ಉದ್ದೇಶವಾಗಿದ್ದು, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಹೇಳಿದರು.
ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುಕನ್ಯಾ, ಸಹಾಯಕ ಲೆಕ್ಕಾಧಿಕಾರಿ ಪರಮೇಶ್ವರ ಹಾಗೂ ಸಹಾಯಕ ಅಭಿವೃದ್ಧಿ ಅಧಿಕಾರಿ ಜಯಶ್ರೀ ಸೇರಿದಂತೆ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.