ಕಾನೂನು ಸುವ್ಯವಸ್ಥೆ ತೃಪ್ತಿಕರ: ಡಿಜಿಪಿ ಡಾ. ಎಂ.ಎ. ಸಲೀಂ
ಮಂಗಳೂರಿಗೆ ಭೇಟಿ ನೀಡಿದ ಅವರು, ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಜಿಲ್ಲೆಯ ಪೊಲೀಸ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ಅಹಿತಕರ ಘಟನೆಗಳಿಲ್ಲದೆ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಇದನ್ನೇ ಮುಂದೆಯೂ ಮುಂದುವರಿಸಿಕೊಂಡು ಹೋಗುವಂತೆ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.
ಉತ್ತರ ಕರ್ನಾಟಕ ಭಾಗದ ಅನೇಕ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ವರ್ಗಾವಣೆ ಕೋರಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಹಂತ ಹಂತವಾಗಿ ಅವರ ವರ್ಗಾವಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿಜಿಪಿ ಭರವಸೆ ನೀಡಿದರು.
ಇದೇ ವೇಳೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಡಿ.ಸಿ.ಆರ್.ಇ. ಎಸ್ಪಿ ಎಸ್.ಎಸ್. ಕಾಶಿ ಅವರು ಸಲ್ಲಿಸಿದ್ದಾರೆ ಎನ್ನಲಾದ ದೂರಿನ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ಆದರೆ, ಈ ವಿವಾದಾತ್ಮಕ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದ ಡಿಜಿಪಿ ಡಾ. ಎಂ.ಎ. ಸಲೀಂ ಅವರು ಮೌನವಾಗಿಯೇ ಸ್ಥಳದಿಂದ ನಿರ್ಗಮಿಸಿದರು.