ಮಹಿಳಾ ಮೀಸಲಾತಿ: ಮೋದಿ ಸರ್ಕಾರ ಮೊಸಳೆ ಕಣ್ಣೀರು ಹಾಕುತ್ತಿದೆ: ರಮಾನಾಥ ರೈ
ಮಂಗಳೂರು: ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಯಾವತ್ತೂ ವಿರೋಧಿಸಿಲ್ಲ. ಬದಲಾಗಿ ದೇಶದಲ್ಲಿ ಪ್ರಥಮ ಪ್ರಧಾನಿ, ರಾಷ್ಟ್ರಪತಿ, ಸ್ಪೀಕರ್, ಸಿಎಂ ಮೊದಲಾದ ಹುದ್ದೆಯನ್ನು ಮಹಿಳೆಯರಿಗೆ ನೀಡಿರುವುದೇ ಕಾಂಗ್ರೆಸ್ ಆಗಿದ್ದು, ಇದೀಗ ನಾರಿಶಕ್ತಿ ವಂದನ ಅಧಿನಿಯಮ ಮಸೂದೆ ವಿಫಲಗೊಂಡ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಮೊಸಳೆ ಕಣ್ಣೀರು ಹಾಕುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾತನಾಡಿ, 2023ರಲ್ಲಿ ಅಂಗೀಕಾರ ಗೊಂಡಿರುವ ಮಹಿಳಾ ಮೀಸಲಾತಿ ಜಾರಿಯಾಗಬೇಕು ಎಂಬುದು ಕಾಂಗ್ರೆಸ್ ಒತ್ತಾಯ ಎಂದವರು ಹೇಳಿದರು.
ಮಹಿಳಾ ಕ್ಷೇತ್ರ ವಿಂಗಡನಾ ಮೀಸಲಾತಿ ಜಾರಿಗೆ ಬಿಜೆಪಿಗೆ ಸಂಖ್ಯಾಬಲ ಇಲ್ಲವೆಂದು ಅರಿವಿದ್ದರೂ ವಿಶೇಷ ಅಧಿವೇಶನ ಕರೆದು ಮಂಡಿಸಿ ಇದೀಗ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವ ಕಾರ್ಯ ನಡೆಸುತ್ತಿದೆ. ಇದು ಚುನಾವಣಾ ಲಾಭಕ್ಕಾಗಿ ಮಾಡುತ್ತಿರುವ ಗಿಮಿಕ್. ಆದರೆ ಇಂತಹ ಅಪಪ್ರಚಾರ ಯತ್ನ ಸಫಲ ಆಗುವುದಿಲ್ಲ. ಈಗಾಗಲೇ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲಿ. ಅದು ಬಿಟ್ಟು ಕಾಂಗ್ರೆಸ್ ಮಹಿಳಾ ವಿರೋಧಿ ಎನ್ನಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಷ್ಟು ಜನ್ಮ ಎತ್ತಿದರೂ ಸಾಧ್ಯವಾಗದು ಎಂದು ಹೇಳಿದರು.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮೀಸಲಾತಿ ಮಸೂದೆ ಮಂಡಿಸಲಾಗಿತ್ತು. ಆದರೆ ಬಿಜೆಪಿ ವಿರೋಧ ಮಾಡಿದ್ದರಿಂದ ಜಾರಿಯಾಗಿರಲಿಲ್ಲ. ಬಳಿಕ ನರಸಿಂಹ ರಾವ್ ಪ್ರಧಾನಿಯಾದಾಗ ಅದೇ ಮೀಸಲಾತಿ ವಿಧೇಕಯವನ್ನು ಅಂದಿನ ಕಾಂಗ್ರೆಸ್ ಸರಕಾರ ಜಾರಿ ಮಾಡಿ ತೋರಿಸಿದೆ. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗಿ ಬದಲಾವಣೆ ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಮಹಿಳೆಯರಿಗೆ ಸಾಮಾಜಿಕ ನ್ಯಾಯ ಕೊಡಿಸಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ನೀಡಿದ್ದು, ವಿಧವಾ ಮಾಸಾಶನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ಥಾಪನೆ, ಅಂಗನವಾಡಿಗಳ ಸ್ಥಾಪನೆ, ಹೆರಿಗೆ ಆಸ್ಪತ್ರೆಗಳು, ಶ್ರೀ ಶಕ್ತಿ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಮಹಿಳೆಯರ ಪರವಾಗಿ ಕೆಲಸ ಮಾಡಿದೆ. ಇದೀಗ ಪಂಚ ಗ್ಯಾರಂಟಿಗಳು ಇರುವುದು ಕೂಡಾ ಹೆಣ್ಮಕ್ಕಳಿಗಾಗಿ. ಕಾಂಗ್ರೆಸ್ ಎಂದೂ ಮಹಿಳೆಯರ ಪರವಾಗಿಯೇ ಕೆಲಸ ಮಾಡಿದೆ. ಹಾಗಾಗಿ ಕಾಂಗ್ರೆಸ್‌ನ್ನು ಮಹಿಳಾ ವಿರೋಧಿ ಎಂದು ಬಿಂಬಿಸಲು ಬಿಜೆಪಿಗೆ ಎಂದೂ ಸಾಧ್ಯವಿಲ್ಲ ಎಂದು ಹೇಳಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಪಿಯುಸ್ ರಾಡ್ರಿಗಸ್, ಬೇಬಿ ಕುಂದರ್, ಶುಭೋದಯ ಆಳ್ವ, ಹರಿನಾಥ್, ಅಪ್ಪಿ, ಮೀನಾಟೆಲ್ಲಿಸ್, ಶಬೀರ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.