ನೆತ್ತೋಡಿ ಫಲ್ಗುಣಿ ನದಿಯಲ್ಲಿ ಅಕ್ರಮ ಮರಳು ತೆಗೆಯಲು ಆಕ್ಷೇಪ: ಜಂಟಿ ಸವೆ೯ ನಡೆಸಿದ ಅಧಿಕಾರಿಗಳು

ನೆತ್ತೋಡಿ ಫಲ್ಗುಣಿ ನದಿಯಲ್ಲಿ ಅಕ್ರಮ ಮರಳು ತೆಗೆಯಲು ಆಕ್ಷೇಪ: ಜಂಟಿ ಸವೆ೯ ನಡೆಸಿದ ಅಧಿಕಾರಿಗಳು


ಮೂಡುಬಿದಿರೆ: ಫಲ್ಗುಣಿ ನದಿಯುತ್ತಿರುವ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ  ನಡೆಸುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ಸಾಯಂಕಾಲ ಮಾರೂರು-ಪುಚ್ಚೆಮೊಗರು ನೆತ್ತೋಡಿ ಪರಿಸರದಲ್ಲಿ ಜಂಟಿ ಸರ್ವೇ ನಡೆಸಿದರು. 


ಬೆಳ್ತಂಗಡಿ ತಾಲೂಕಿನ ಪ್ರದೇಶದಲ್ಲಿ ಮರಳು ತೆಗೆಯಲು ಅನುಮತಿ ನೀಡಿದ್ದು, ಮೂಡುಬಿದಿರೆ ತಾಲೂಕಿನ ನದಿ ದಡದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಲಾಗಿದೆ. ನದಿ ತಟದಲ್ಲಿ ಜೆಸಿಐ ಯಂತ್ರ ಬಳಸಿ ಸಮತ್ತಟ್ಟು ಮಾಡಲಾಗಿದೆ. ಅಲ್ಲದೇ ರಸ್ತೆಯನ್ನೂ ನದಿಯಲ್ಲಿ ನಿರ್ಮಿಸಲಾಗಿದೆ. ನದಿ ತಟದಲ್ಲಿರುವ ದೊಡ್ಡ ಮರಗಳನ್ನು ತೆರೆವುಗೊಳಿಸಲಾಗಿದೆ ಎಂದು ರೈತರು ಆರೋಪಿಸಿದರು. ಈ ಆವಾಂತರದಿಂದಾಗಿ ಪರಿಸರದಲ್ಲಿ ನೆರೆ ಭೀತಿ ಉಂಟಾಗುವ ಸಂಭವವಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.


ನದಿಯಲ್ಲಿ ಯವುದೇ ರಸ್ತೆಯನ್ನು ನಿರ್ಮಿಸಲಾಗಿಲ್ಲ ಎಂದು ಅಧಿಕಾರಿ ಪವನ್ ಹೇಳಿಕೆ ನೀಡಿದಾಗ, ರೈತರು ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. 


ಈ ಸಂದರ್ಭದಲ್ಲಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಮಾತನಾಡಿದ ರೈತ ಮುಖಂಡ, ವಕೀಲ ಶಾಂತಿಪ್ರಸಾದ್ ಹೆಗ್ಡೆ, ಕಾನೂನು ಉಲ್ಲಂಘಿಸಿ ಮರಳುಗಾರಿಕೆ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆದರೆ ಅಧಿಕಾರಿಗಳು ಗಣಿ ಮಾಫಿಯದವರ ಜೊತೆಗೂಡಿ ಜನರ ಪರವಾಗಿ ಸ್ಪಂದಿಸುತ್ತಿಲ್ಲ. ರೈತರು ದಾಖಲೆ ಕೇಳಿದರೆ ಸತಾಯಿಸುತ್ತಿದ್ದಾರೆ. ಮಹಜರಿನ ಮಾಹಿತಿ ಕೇಳಿದರೂ ಕೊಡಿತ್ತಿಲ್ಲ. ಡಂಪಿಂಗ್ ಯಾರ್ಡ್ ನಿರ್ಮಿಸಲಾಗಿದ್ದು, ಅದಕ್ಕೆ ಭೂಪರಿವರ್ತನೆ ಆಗಿದೆಯೇ ಎಂದು ಕೇಳಿದರೆ ಅದಕ್ಕೂ ಅಧಿಕಾರಿಗಳಿಂದ ಉತ್ತರವಿಲ್ಲ. ಮರಳುಗಾರಿಕೆಯಲ್ಲಿ ಸ್ಪಷ್ಟವಾಗಿ ಕಾನೂನು ಉಲ್ಲಂಘನೆಯಾಗುತ್ತಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದು ಗಣಿ ಮಾಫಿಯದವರೊಂದಿಗೆ ಶಾಮೀಲಾಗಿದ್ದಾರೆ ಎಂಬುದು ಸಾಬೀತಾಗಿದೆ. ಅಧಿಕಾರಿಗಳ ನಡೆಯ ವಿರುದ್ಧ ಶೀಘ್ರದಲ್ಲೇ ಜಿಲ್ಲಾ ಮಟ್ಟದಲ್ಲಿ ರೈತರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. 

ದೂರುದಾರ ರೋಹನ್ ಕಾರ್ಡೋಜ, ಮುಖಂಡ ಜಾಯ್ಲಸ್ ಡಿಸೋಜ ತಾಕೋಡೆ, ಮೂಡುಬಿದಿರೆ ಪೊಲೀಸ್ ಉಪನೀರಿಕ್ಷಕಿ ಪ್ರತಿಭಾ, ಕಂದಾಯ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ರೈತರು, ಸ್ಥಳೀಯರು ಉಪಸ್ಥಿತರಿದ್ದರು.

ಇಲಾಖೆಯ ಭೂ ವಿಜ್ಞಾನಿಗಳಾದ ಸತ್ಯಭಾಮ, ಪವನ್ ವಿ. ಹಾಗೂ ಕಂದಾಯ ಇಲಾಖೆಯ ಪರವಾಗಿ ಕಂದಾಯ ನಿರೀಕ್ಷಕ ರವಿ ಮಲ್ಯ ಸರ್ವೆ ನಡೆಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article