ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಸ್ವರ್ಣೋದ್ಯಮಕ್ಕಾಗಿ ಕೇಂದ್ರ ಸರಕಾರವು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವಂತೆ ಬೇಡಿಕೆ ಇಟ್ಟ ಅರುಣ್ ಜಿ. ಶೇಟ್
ಉಡುಪಿ: ಉಡುಪಿ ನಗರದಲ್ಲಿ ನಡೆದ IIGJ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ ಆ್ಯಂಡ್ ಜ್ಯುವೆಲ್ಲರಿ) ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ನಡೆದ ಹಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅರುಣ್ ಜಿ. ಶೇಟ್ ಅವರು ಮಹತ್ವದ ಬೇಡಿಕೆಯನ್ನು ಮುಂದಿಟ್ಟರು. ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಸ್ವರ್ಣೋದ್ಯಮ ಕ್ಷೇತ್ರಕ್ಕಾಗಿ ಕೇಂದ್ರ ಸರ್ಕಾರವು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಅವರು ತಮ್ಮ ಮಾತಿನಲ್ಲಿ, “ಭಾರತದ ಜಿಡಿಪಿಯಲ್ಲಿ ಸ್ವರ್ಣೋದ್ಯಮದ ಕೊಡುಗೆ ಶೇಕಡಾ 7ಕ್ಕಿಂತ ಹೆಚ್ಚು ಇದೆ. ಆದರೆ ಜವುಳಿ ಕ್ಷೇತ್ರದ ಕೊಡುಗೆ ಶೇಕಡಾ 2 ರಷ್ಟು ಮಾತ್ರ ಇದ್ದರೂ ಅದಕ್ಕೆ ಪ್ರತ್ಯೇಕ ಸಚಿವಾಲಯವಿದೆ. ಆದರೆ ಸ್ವರ್ಣೋದ್ಯಮ ಕ್ಷೇತ್ರವು ಅಸಂಘಟಿತ ವಲಯದಲ್ಲಿದ್ದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈ ಕ್ಷೇತ್ರದ ಬೆಳವಣಿಗೆಗಾಗಿ ಪ್ರತ್ಯೇಕ ಸಚಿವಾಲಯದ ಅವಶ್ಯಕತೆ ತೀವ್ರವಾಗಿದೆ” ಎಂದು ಅಭಿಪ್ರಾಯಪಟ್ಟರು.
ಅರುಣ್ ಜಿ. ಶೇಟ್ ಅವರ ಈ ಸಲಹೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, “ದೇಶದ ಜಿಡಿಪಿಯಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಸ್ವರ್ಣೋದ್ಯಮ ಕ್ಷೇತ್ರದ ಬಗ್ಗೆ ಇಂತಹ ಬೇಡಿಕೆ ಸಮಂಜಸವಾಗಿದೆ” ಎಂದು ಹೇಳಿದರು. ಜೊತೆಗೆ, IIGJ ಸಂಸ್ಥೆಯ ವಿದ್ಯಾರ್ಥಿಯಾಗಿ ಕ್ಷೇತ್ರದ ಭವಿಷ್ಯದ ಬಗ್ಗೆ ದೂರದೃಷ್ಟಿಯಿಂದ ಸಲಹೆ ನೀಡಿದಕ್ಕಾಗಿ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವು ಸ್ವರ್ಣೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹೊಸ ಚಿಂತನೆಗಳನ್ನು ಹುಟ್ಟಿಸುವ ವೇದಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಸಾಧ್ಯತೆಯಿದೆ.