ವಿಶ್ವಶಾಂತಿಗಾಗಿ ಅಣುಬಾಂಬು ತ್ಯಜಿಸಿ, ಅಣುವೃತಗಳನ್ನು ಪಾಲಿಸಿ: ಪೂಜ್ಯ ಏಲಾಚಾರ್ಯ ಪ್ರಸಂಗಸಾಗರ ಮುನಿಮಹಾರಾಜರು
ಬೆಳ್ತಂಗಡಿ ಬಸದಿಯಲ್ಲಿ ಭಗವಾನ್ ಮಹಾವೀರ ಸ್ವಾಮಿಯ 2625ನೆ ಜಯಂತ್ಯುತ್ಸವ ಆಚರಣೆ
ಅವರು ಮಂಗಳವಾರ ಬೆಳ್ತಂಗಡಿಯಲ್ಲಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಭಗವಾನ್ ಮಹಾವೀರಸ್ವಾಮಿಯ 2625ನೆ ಜಯಂತ್ಯುತ್ಸವ ಆಚರಣೆ ಸಂದರ್ಭ ಮಂಗಲ ಪ್ರವಚನ ನೀಡಿದರು.
ಮಹಾವೀರಜಯಂತಿ ಆಚರಣೆಯೊಂದಿಗೆ, ಶ್ರದ್ಧಾ-ಭಕ್ತಿಯಿಂದ ದೇವರ ಪೂಜೆ, ಆರಾಧನೆ ಮಾಡಿ, ವೃತ-ನಿಯಮಗಳನ್ನು ಪಾಲಿಸಿ, ಸಾಧು-ಸಂತರ ಸೇವೆ ಮಾಡಿದಾಗ ಜೀವನ ಪಾವನವಾಗುತ್ತದೆ. ಮದ್ಯ-ಮಾಂಸ, ಮಧು ಸೇವನೆ ತ್ಯಾಗ ಮಾಡಿ ಧನಾತ್ಮಕ ಚಿಂತನೆಯೊಂದಿಗೆ, ಅಹಿಂಸಾ ತತ್ವ ಪಾಲನೆ ಮಾಡಿದಾಗ ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಅವರು ಹೇಳಿದರು.
ಬಸದಿಯ ಸ್ವಚ್ಛತೆ, ನಿರ್ವಹಣೆ ಮತ್ತು ಶಿಸ್ತು ಬಗ್ಯೆ ಪೂಜ್ಯರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿ, ಅನುವಂಶಿಕ ಆಡಳಿತಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಮತ್ತು ಕುಟುಂಬಸ್ಥರನ್ನು ಅಭಿನಂದಿಸಿದರು.
ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ತೀರ್ಥರು ರಾಗ-ದ್ವೇಷ ರಹಿತವಾಗಿ ಸಕಲ ಜೀವಿಗಳಿಗೂ ಆತ್ಮಕಲ್ಯಾಣಕ್ಕಾಗಿ ಧರ್ಮೋಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಸಮವಸರಣದಲ್ಲಿ ಸಕಲ ಜೀವಿಗಳಿಗೂ ಉಪದೇಶ ಆಲಿಸಲು ಸಮಾನ ಅವಕಾಶವಿದೆ. ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ. ಜನ್ಮಜಯಂತಿ ಆಚರಣೆಯೊಂದಿಗೆ ಮಹಾವೀರರ ತತ್ವಗಳನ್ನೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಡಾ. ಕೆ. ಜೀವಂಧರ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಡಾ. ಮಾಲತಿ ಹೆಗ್ಡೆ, ಡಾ. ಪ್ರಿಯಾ ಬಳ್ಳಾಲ್, ಸುಮತಿ ಬಳ್ಳಾಲ್, ವಿನಯಾ ಜೆ. ಬಳ್ಳಾಲ್, ಮಣಿಮಾಲಾ ಬಳ್ಳಾಲ್, ವನಮಾಲಾ ಬಳ್ಳಾಲ್, ಶ್ರೀನಾಥ ಬಳ್ಳಾಲ್, ಪ್ರಸನ್ನಕುಮಾರ್, ಬೆಳ್ತಂಗಡಿ, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಪ್ರಬಂಧಕ ಎಂ. ಜಿನರಾಜ ಶೆಟ್ಟಿ ಉಪಸ್ಥಿತರಿದ್ದರು.
ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಸ್ವಾಗತಿಸಿದರು.
ಬಸದಿಯ ಪ್ರಧಾನ ಅರ್ಚಕರಾದ ಜಯವರ್ಮರಾಜ ಇಂದ್ರರಿಂದ ಶಾಂತಿಮಂತ್ರ ಪಠಣದೊಂದಿಗೆ ಸಮಾರಂಭ ಸಮಾಪನಗೊಂಡಿತು.
ಶಿಕ್ಷಕರಾದ ಧರಣೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.