ಉಜಿರೆ ಎಸ್‌ಡಿಎಂ ವಿದ್ಯಾರ್ಥಿಗಳಿಂದಲೇ ನಿರ್ಮಾಣಗೊಂಡ ಕಿರು ಚಿತ್ರ ‘ಅವ್ಯಾಹತ’
ಕಳೆದ 7 ವರ್ಷಗಳಲ್ಲಿ ಕಾಲೇಜಿನ ವಿಭಾಗ 41 ಕಿರುಚಿತ್ರ, 33 ಸಂದರ್ಶನ, 3 ಮ್ಯೂಸಿಕ್ ಆಲ್ಬಮ್‌ಗಳನ್ನು ನಿರ್ಮಿಸಿರುವುದು ಅಪೂರ್ವ ದಾಖಲೆಯಾಗಿದೆ. ವಿದ್ಯಾರ್ಥಿಗಳ 3 ವರ್ಷಗಳ ಅಧ್ಯಯನದ ಫಲವಾಗಿ 2 ಫೀಚರ್ ಫಿಲಂಗಳು ಅವರ ವೃತ್ತಿಪರತೆ ಮತ್ತು ಪ್ರತಿಭೆಯನ್ನು ಬಿಂಬಿಸುತ್ತದೆ. ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ‘ಟ್ಯಾಲೆಂಟ್ಸ್ ಡೇ’ ಫೀಚರ್ ಫಿಲ್ಮ್ ಬಳಿಕ ಇದೀಗ 2024-25ರ ವಿದ್ಯಾರ್ಥಿಗಳು ಎರಡನೇ ಫೀಚರ್ ಫಿಲಂ ‘ಅವ್ಯಾಹತ’ ವಿಭಿನ್ನ ಪ್ರಯೋಗವಾಗಿ ನಿರ್ಮಿಸಿದ್ದಾರೆ.
ಕಾಲೇಜು ಯುವಕರ ಪ್ರೇಮ, ಪ್ರೀತಿಯ ಕಥಾಹಂದರವನ್ನೊಳಗೊಂಡ ಕಿರುಚಿತ್ರದಲ್ಲಿ ಗ್ರಾಮೀಣ ಮಹಿಳೆಯ ಖಾತೆಯ ಓಟಿಪಿ ಪಡೆದು ಬ್ಯಾಂಕ್ ಮೊಬಲಗು ಲೂಟಿಗೈದ ಪ್ರಕರಣ, ಕಾಲೇಜು ಫೀಸು ಕಟ್ಟಲು ಮಾನವೀಯತೆಯಿಂದ ನೆರವಾದ ಸಹಾಧ್ಯಾಯಿ, ವಿದ್ಯಾರ್ಥಿಗಳ ಹೊಡೆದಾಟ, ಮುಂತಾದ ಕಥಾವಸ್ತುವನ್ನು ಆಯ್ದುಕೊಂಡು 45 ನಿಮಿಷದಲ್ಲಿ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ ‘ಅವ್ಯಾಹತ’ ಕಿರುಚಿತ್ರ ಯಾವುದೇ ಚಿತ್ರಕ್ಕೂ ಕಡಿಮೆಯಿಲ್ಲದಷ್ಟು ಮೌಲ್ಯಯುತವಾಗಿ ಮೂಡಿಬಂದಿದೆ.
ಕಾಲೇಜು ಪರಿಸರದಲ್ಲೇ ಸಹಜ ವಾತಾವರಣದಲ್ಲಿ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳೇ ಪಾತ್ರ ನಿರ್ವಹಿಸಿ ಸುಂದರ ಛಾಯಾಗ್ರಹಣ, 2 ಹಾಡುಗಳನ್ನೊಳಗೊಂಡು ರೂಪಿಸಿದ ಕಿರುಚಿತ್ರ ಸಿನಿಪ್ರಿಯರ ಮೆಚ್ಚುಗೆ ಗಳಿಸಬಲ್ಲುದು. ಲೋಹಿತ್ ಎಸ್. ಕಳೆಂಜ ನಿರ್ದೇಶನದಲ್ಲಿ ಪ್ರಜ್ವಲ್ ಗೌಡ ಅವರ ಛಾಯಾಗ್ರಹಣ, ಯೋಗೀಶ್ ಅವರ ನಿರ್ವಹಣೆ, ಶರತ್ ಅವರ ವಿನ್ಯಾಸ, ತರುಣ್ ಮತ್ತು ಸಹನಾ ಅವರ ಮಾರ್ಕೆಟಿಂಗ್ ಕಾರ್ಯದಲ್ಲಿ ಚಿತ್ರ ಯಶಸ್ಸು ಕಾಣುವುದರಲ್ಲಿ ಸಂದೇಹವಿಲ್ಲ.
ಪದವಿ ಮಟ್ಟದ ವಿದ್ಯಾರ್ಥಿಗಳು ಕನಿಷ್ಠ ವೃತ್ತಿಪರರ ಸಹಕಾರದೊಂದಿಗೆ ಫೀಚರ್ ಫಿಲಂ ನಿರ್ಮಿಸಿರುವುದು ಗಮನಾರ್ಹ ಸಾಧನೆಯಾಗಿದೆ. ಜಿಲ್ಲೆಯ ಕಾಲೇಜುಗಳಲ್ಲಿ ಏಕೈಕ ವಿಭಾಗವಾದ ಬಿ ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲಂ ಮೇಕಿಂಗ್ ವಿಭಾಗದ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ. ವಿಭಾಗ ಮುಖ್ಯಸ್ಥ ಮಾಧವ ಹೊಳ್ಳ ಪ್ರಸ್ತಾವಿಸಿ ವಿಭಾಗದ 6 ವಿದ್ಯಾರ್ಥಿಗಳು 3 ತಿಂಗಳ ಅಲ್ಪಾವಧಿಯಲ್ಲಿ 45 ನಿಮಿಷದ ಕಿರುಚಿತ್ರವನ್ನು 6000 ರೂ. ವೆಚ್ಚದಲ್ಲಿ ನಿರ್ಮಿಸಿ ದಾಖಲೆ ನಿರ್ಮಿಸಿದ್ದಾರೆ ಎಂದರು.
ಚಿತ್ರದ ನಿರ್ದೇಶಕ ಲೋಹಿತ್ ಎಸ್ ಕಳೆಂಜ ಮಾತನಾಡಿ, ೩ ವರ್ಷದ ಅಧ್ಯಯನದಲ್ಲಿ ಸಿನಿಮಾ ನಿರ್ಮಿಸುವ ಕನಸು ಚಿಗುರೊಡೆದು ಆಸಕ್ತಿ ಬೆಳೆಸಿ ‘ದಸ್ಕತ್’ ಎಂಬ ಸಿನಿಮಾ ನಿರ್ಮಿಸಿದೆ. ‘ಸು ಫ್ರಮ್ ಸೋ’ ಸಿನೆಮಾದಿಂದ ಪ್ರೇರಣೆಗೊಂಡು ಹಟದಿಂದ 3 ವರ್ಷದ ಅನುಭವವನ್ನು ಸಿನಿಮಾದಲ್ಲಿ ಅಳವಡಿಸಲು ಪ್ರಯೋಗಾತ್ಮಕವಾಗಿ 25 ವೆಬ್ ಸೀರೀಸ್, ದೇವಿ ಮಹಾತ್ಮೆ ಸಿನಿಮಾಗಳನ್ನು ನೋಡಿ ಖುಷಿ ಪಟ್ಟು ಚಿಕ್ಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಿ ಜೀವನದಲ್ಲಿ ಯಶಸ್ಸು ಕಾಣಬೇಕೆಂಬ ಹಂಬಲ ಹೊಂದಿ ಸಾಹಸಕ್ಕಿಳಿದೆ ಎಂದರು.
ಕಾಲೇಜು ಸೆಮಿನಾರ್ ಹಾಲ್‌ನಲ್ಲಿ ಏರ್ಪಡಿಸಲಾದ ಪ್ರೀಮಿಯರ್ ಶೋದಲ್ಲಿ ಕಾಲೇಜು ಪ್ರಾಚಾರ್ಯ ಪ್ರೊ. ವಿಶ್ವನಾಥ ಪಿ. ಮಾತನಾಡಿ, ನಗರ ಪ್ರದೇಶದಲ್ಲಿ ಮಾತ್ರ ಸೀಮಿತವಾಗದೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೂ ಸಿನಿಮಾ ಮಾಡಲು ಶಕ್ತರು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿಗೆ ತಕ್ಕಂತೆ ಕಾಲೇಜು ತರಬೇತಿ ನೀಡಿರುವುದೇ ಸಿನಿಮಾ ನಿರ್ಮಾಣಕ್ಕೆ ಕಾರಣ ವಾಗಿದೆ. ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳನ್ನು ಅಳವಡಿಸಿ ಅವಕಾಶ ಕಲ್ಪಿಸಿಕೊಡುತ್ತಿದೆ. ಬಿ ವೋಕ್ ಹೊಸ ವಿಭಾಗದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ವಿದ್ಯಾರ್ಥಿಗಳ ಸಾಧನೆಗೆ ಶುಭ ಹಾರೈಸುತ್ತೇನೆ ಎಂದರು.