ವಕ್ವಾಡಿಯಲ್ಲಿ ಬೇಟೆಯ ವೀರಗಲ್ಲು ಪತ್ತೆ
ಈ ವೀರಗಲ್ಲಿನ ಕೆಳಗಿನ ಅಂಕಣದಲ್ಲಿ ಇಬ್ಬರು ವೀರರು, ತಮ್ಮ ಬೇಟೆಯ ನಾಯಿಗಳನ್ನು ಹಿಡಿದು ನಿಂತಿರುವ ಚಿತ್ರಣವಿದೆ. ಎರಡನೇ ಅಂಕಣದಲ್ಲಿ ಕೊಂಬಿನ ಎರಡು ಜಿಂಕೆಗಳ ಚಿತ್ರಣವಿದ್ದು, ಅದರಲ್ಲಿ ಮೇಲಿನ ಜಿಂಕೆಯ ಕೊರಳನ್ನು ಸೀಳಿದ ಬಾಣ ಅಥವಾ ಈಟಿಯ ಚಿತ್ರಣವಿದೆ. ಈ ಜಿಂಕೆಯ ಕೆಳಭಾಗದಲ್ಲಿ ಎಡಕ್ಕೆ ಮುಖಮಾಡಿ ನಿಂತಿರುವ ಜಿಂಕೆಯನ್ನು ಚಿತ್ರಿಸಲಾಗಿದೆ. ಈ ಜಿಂಕೆಗಳ ಬಲಭಾಗದಲ್ಲಿ ನಿಂತಿರುವ ಇಬ್ಬರು ವೀರರ ಶಿಲ್ಪಗಳಿವೆ. ಈ ವೀರಗಲ್ಲಿನ ಮೇಲಿನ ಅಂಕಣದ ಮಧ್ಯಭಾಗದಲ್ಲಿ ಎತ್ತರವಾದ ಪೀಠದ ಮೇಲೆ ಉದ್ದನೆಯ ಲಿಂಗವನ್ನು ಕೆತ್ತಲಾಗಿದೆ. ಲಿಂಗದ ಮೇಲ್ಭಾಗದಲ್ಲಿ ದ್ರಾವಿಡ ಶೈಲಿಯ ದೇವಾಲಯದ ವಿಮಾನದ ಚಿತ್ರಣವಿದೆ. ಈ ಲಿಂಗದ ಎಡ-ಬಲದಲ್ಲಿ ಕೈಮುಗಿದು ಕುಳಿತಿರುವ ಇಬ್ಬರು ವೀರರ ಚಿತ್ರಣವಿದೆ.
ಇದು ಆಯತಾಕಾರದ ಶಿಲಾಫಲಕವಾಗಿದ್ದು, ಸುಮಾರು 45 ಇಂಚು ಉದ್ದ 22.5 ಇಂಚು ಅಗಲವಾಗಿದೆ. ಮೇಲಿನ ಪಟ್ಟಿಕೆ 12.5 ಇಂಚು ಎತ್ತರ, ಮಧ್ಯದ ಪಟ್ಟಿಕೆ 17.5 ಇಂಚು ಎತ್ತರ ಹಾಗೂ ಕೆಳಗಿನ ಪಟ್ಟಿಕೆ 15 ಇಂಚು ಎತ್ತರವಾಗಿದೆ.
ವೀರಗಲ್ಲಿನ ಚಾರಿತ್ರಿಕ ಮಹತ್ವ:
ಬೇಟೆ ಪ್ರಾಚೀನ ಕಾಲದ ರಾಜಮನೆತನಗಳ ಹವ್ಯಾಸ ಮತ್ತು ರಾಜನೀತಿಯ ಭಾಗವಾಗಿತ್ತು. ಭಾರತೀಯ ಮಹಾಕಾವ್ಯಗಳು, ಸಾಹಿತ್ಯ ಮತ್ತು ತುಳುನಾಡಿನ ಪಾಡ್ದನಗಳೆಂಬ ಜಾನಪದ ಮಹಾಕಾವ್ಯಗಳಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿಯಿದೆ. ತುಳುನಾಡಿನ ಜನಪದ ಮಹಾಕಾವ್ಯಗಳಾದ ಸಿರಿ ಪಾಡ್ದನ ಮತ್ತು ಕೋಟಿ-ಚೆನ್ನಯರ ಪಾಡ್ದನಗಳಲ್ಲಿ ಬೇಟೆಯ ಚಿತ್ರಣಗಳಿವೆ. ಆದರೆ, ಐತಿಹಾಸಿಕ ದಾಖಲೆಗಳಾದ ಶಾಸನಗಳಲ್ಲಿ ಬೇಟೆಯ ಬಗ್ಗೆ ಅತ್ಯಂತ ವಿರಳವಾದ ಮಾಹಿತಿ ಇದೆ. ಆದ್ದರಿಂದ ಈ ಶಾಸನಕ್ಕೆ ಬಹಳಷ್ಟು ಚಾರಿತ್ರಿಕ ಮಹತ್ವವಿದೆ.
ಇದು ತುಳುನಾಡಿನಲ್ಲಿ ಕಂಡುಬಂದ ಎರಡನೇ ಬೇಟೆಯ ವೀರಗಲ್ಲು ಶಾಸನವಾಗಿದೆ. ಮೊದಲನೇ ವೀರಗಲ್ಲು, ಹೆಬ್ರಿ ತಾಲೂಕಿನ ಸೋಮೇಶ್ವರದಲ್ಲಿದೆ. ಈ ಶಾಸನದಲ್ಲಿ ಚಿತ್ರಿತವಾಗಿರುವ ಕೊಂಬಿನ ಜಿಂಕೆಗಳು ಕೊಲ್ಲೂರಿನ ಶ್ರೀ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ಹೇರಳವಾಗಿವೆ. ಹಂದಿ ಬೇಟೆಯ ಶಿಲ್ಪಗಳು ಕರ್ನಾಟಕದಲ್ಲಿ ಸಾಕಷ್ಟು ಕಂಡುಬಂದಿವೆ. ಆದರೆ, ಜಿಂಕೆ ಬೇಟೆಯ ಶಿಲ್ಪಗಳು ಅತ್ಯಂತ ಅಪರೂಪ.
ಶಾಸನದಲ್ಲಿ ಚಿತ್ರಿತವಾಗಿರುವ ಇಬ್ಬರು ವೀರರು ಸಾಮಾನ್ಯ ವ್ಯಕ್ತಿಗಳಾಗಿರದೆ, ರಾಜಕುಮಾರರಂತೆ ಕಂಡುಬರುತ್ತದೆ. ಕೊರಳಲ್ಲಿ ಕಂಠಾಭರಣ, ಭುಜಕೀರ್ತಿ, ತೋಳ್ಬಂದಿ, ಕೈಕಡಗ ಮತ್ತು ಸೊಂಟದಲ್ಲಿ ಕಿರುಗತ್ತಿಗಳಿವೆ. ಒಬ್ಬ ವೀರನ ಕೈಯಲ್ಲಿ ಬಿಲ್ಲು, ಮತ್ತೊಬ್ಬನ ಕೈಯಲ್ಲಿ ಭರ್ಜಿ ಅಥವಾ ಬಾಣವಿದೆ. ವೀರರ ಮುಖದಲ್ಲಿ ಗಡ್ಡ-ಮೀಸೆಗಳಿವೆ. ಕಿವಿಯಲ್ಲಿ ಕುಂಡಲಗಳಿವೆ. ಈ ಲಕ್ಷಣಗಳು ನಿಸ್ಸಂದೇಹವಾಗಿ ಚಿತ್ರಿತ ವೀರರು ಸಾಮಾನ್ಯ ವ್ಯಕ್ತಿಗಳಾಗಿರದೆ. ರಾಜಕುಮಾರರೇ ಆಗಿರಬೇಕು ಎಂಬುದನ್ನು ಪುಷ್ಠೀಕರಿಸುತ್ತವೆ. ಕೊಂಬಿನ ಜಿಂಕೆಗಳ ಬೇಟೆಯ ಸಂಧರ್ಭದಲ್ಲಿ ಕೊಂಬಿನ ಜಿಂಕೆಗಳ ಹಠಾತ್ ದಾಳಿಯಲ್ಲಿ ಮೃತರಾಗಿರುವಂತೆ ಕಂಡುಬರುತ್ತದೆ. ಆದ್ದರಿಂದ ಮೃತ ವೀರರನ್ನು ದೇವರ ಸನ್ನಿಧಿಯಲ್ಲಿ ಕುಳಿತಂತೆ ಚಿತ್ರಿಸಿ, ಅವರು ಸ್ವರ್ಗಸ್ಥರಾದರೆಂಬುದನ್ನು ಸಾಂಕೇತಿಕವಾಗಿ ಚಿತ್ರಿಸಿ ತೋರಿಸಲಾಗಿದೆ. ಜಿಂಕೆ ಬೇಟೆಯಲ್ಲಿ ಪ್ರಾಣವನ್ನು ಕಳೆದುಕೊಂಡ ವೀರರ ಅಪರೂಪದ ವೀರಗಲ್ಲು ಇದು.
ಕಾಲಮಾನ:
ಈ ವೀರಗಲ್ಲಿನಲ್ಲಿ ಯಾವುದೇ ಬರವಣಿಗೆ ಇಲ್ಲ. ಕೇವಲ ಘಟನೆಯೊಂದರ ನಿರೂಪಾತ್ಮಕ ಶಿಲ್ಪಗಳಿವೆ. ಆದ್ದರಿಂದ ನಿಖರ ಕಾಲಮಾನವನ್ನು ನಿರ್ಣಯಿಸುವುದು ಅತ್ಯಂತ ಕಷ್ಟಕರ ಕೆಲಸ. ವೀರಗಲ್ಲಿನ ಶಿಲ್ಪಗಳ ಶೈಲಿಯ ಆಧಾರದ ಮೇಲೆ ಕಾಲವನ್ನು ನಿರ್ಧರಿಸಬೇಕಾಗುತ್ತದೆ. ವೀರಗಲ್ಲಿನ ಮೇಲಿನ ಪಟ್ಟಿಕೆಯಲ್ಲಿ ಚಿತ್ರತವಾದ ಶಿವಲಿಂಗ ಪ್ರಾತಿನಿಧಿಕವಾಗಿ 8-10ನೇ ಶತಮಾನದ ತುಳುನಾಡಿನ ಲಿಂಗಗಳನ್ನು ಹೋಲುತ್ತದೆ. ಆದ್ದರಿಂದ ಶಿಲ್ಪಶೈಲಿಯ ಆಧಾರದ ಮೇಲೆ ಸುಮಾರು 9-10ನೇ ಶತಮಾನದ, ಆಳುಪರ ಕಾಲದ ವೀರಗಲ್ಲು ಎಂದು ನಿರ್ಧರಿಸಬಹುದಾಗಿದೆ.
ಈ ಸಂಶೋಧನೆಗೆ ನೆರವಾದ ಕವಿತಾ ಕುಲಾಲ್ ವಕ್ವಾಡಿ, ಭಂಡಾರ‍್ಕರ್ಸ ಕಾಲೇಜಿನ ವಿಧ್ಯಾರ್ಥಿನಿ ಉನ್ನತಿ, ವಕ್ವಾಡಿ ದ್ಯಾಗಳಮನೆ ಬಾಬುಶೆಟ್ಟಿ, ಹೇಮಾ ಶೆಟ್ಟಿ, ನಾಗರಾಜ ಆಚಾರ್ಯ ಹಾಗೂ ಆದಿಮ ಕಲಾ ಟ್ರಸ್ಟ್‌ನ ಪ್ರದೀಪ್ ಕುಮಾರ್ ಬಸ್ರೂರು, ಗಣೇಶ್‌ರಾಜ್ ಸರಳೇಬೆಟ್ಟು ಮತ್ತು ರಾಘವೇಂದ್ರ ಕುಲಾಲ್ ಅವರಿಗೆ ನಾನು ಆಭಾರಿಯಾಗಿದ್ದೇನೆ.
