ನವ ವಿವಾಹಿತೆ ಆತ್ಮಹತ್ಯೆ
ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅಶ್ವತಿ ಪಿ.ವಿ. (24) ಮೃತಪಟ್ಟ ದುರ್ದೈವಿ. ಕಾಸರಗೋಡು ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕುಟ್ಟಿಕ್ಕೋಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇತೂರುಪಾರದ ವಟ್ಟಂತಟ್ಟ ನಿವಾಸಿಯಾದ ಪುಷ್ಪಾ ಮತ್ತು ದಿ.ಸುಕು ದಂಪತಿಯ ಪುತ್ರಿ ಅಶ್ವತಿ, ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕರ್ತವ್ಯದಲ್ಲಿದ್ದರು. ಇವರಿಗೆ ಕಳೆದ ಏಪ್ರಿಲ್ 5 ರಂದು ಕೊಡೋಂ-ಬೇಲೂರು ಗ್ರಾಮ ಪಂಚಾಯತ್ನ ಪರಕ್ಕಲೈ ಬಳಿಯ ಚೀತಕ್ಕಾವು ಮೂಲದ ಹತ್ತಿರದ ಸಂಬಂಧಿ ರೂಪೇಶ್ ಎಂಬುವವರೊಂದಿಗೆ ವಿವಾಹವಾಗಿತ್ತು. ಮದುವೆಯಾಗಿ ಅತ್ಯಂತ ಸಂತೋಷದಿಂದ ಇರಬೇಕಾಗಿದ್ದ ಯುವತಿ, ಮೇ 18 ರಂದು ಕಾಸರಗೋಡು ಪಟ್ಟಣದ ಮನೆಯಲ್ಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ವಿಷ ಸೇವಿಸಿ ಅಶ್ವತಿ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ, ಅವರನ್ನು ತಕ್ಷಣವೇ ಪರಿಯಾರಂನಲ್ಲಿರುವ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.