ಕೊಲ್ಲೂರು: ಅಪಘಾತದ ವೇಳೆ ಪಾರ್ಥಿವ ಶರೀರದ ಮೇಲಿನ ಆಭರಣ ಕದ್ದವನ ಸೆರೆ

ಕೊಲ್ಲೂರು: ಅಪಘಾತದ ವೇಳೆ ಪಾರ್ಥಿವ ಶರೀರದ ಮೇಲಿನ ಆಭರಣ ಕದ್ದವನ ಸೆರೆ


ಕುಂದಾಪುರ: ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ದಳಿ ಎಂಬಲ್ಲಿ ಮೇ 17ರಂದು ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೇರಳ ಮೂಲದ ಮಹಿಳೆಯೊಬ್ಬರ ಮೈಮೇಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಕೊಲ್ಲೂರು ಪೊಲೀಸರು ದೂರು ಸ್ವೀಕರಿಸಿದ 24 ಗಂಟೆಯೊಳಗೆ ಬಂಧಿಸಿ, ಸುಮಾರು ₹2.07 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊಲ್ಲೂರಿನ ಕೊಡಚಾದ್ರಿ ನೋಡಿಕೊಂಡು ವಾಪಾಸು ಬರುತ್ತಿರುವಾಗ ಕೇರಳದ ಪ್ರವಾಸಿಗರ ಜೀಪಿಗೆ ಇನ್ಸುಲೇಟೆಡ್ ಟೆಂಪೋ ಡಿಕ್ಕಿಯಾಗಿತ್ತು. ಈ ದುರಂತದಲ್ಲಿ ಕೇರಳದ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದರು. ಅವಘಾತ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಒಯ್ಯುವಲ್ಲಿ ಸಹಕರಿಸಿದ್ದರು. 

ಈ ವೇಳೆ ಸಹಕರಿಸುವ ನೆವದಲ್ಲಿ ಬಂದಿದ್ದ ಯಾರೋ ಮಾನವೀಯತೆ ಮರೆತು ಪಾರ್ಥಿವ ಶರೀರದ ಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದರು. ಅಪಘಾತದ ಬಗ್ಗೆ ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಈ ನಡುವೆ ಕೇರಳದ ಯಾತ್ರಾರ್ಥಿಗಳಲ್ಲಿ ಬದುಕುಳಿದವರು ತಮ್ಮೂರಿಗೆ ಹೋದ ನಂತರ, ಮೃತರಾದವರ ಆಭರಣಗಳು ಕಾಣೆಯಾಗಿರುವುದನ್ನು ಗಮನಿಸಿ ಪುನಃ ಕೊಲ್ಲೂರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2026ರಡಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 303(2) ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಕೊಲ್ಲೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನಯ ಎಂ. ಕೊರ್ಲಹಳ್ಳಿ ನೇತೃತ್ವದ ತಂಡ ತಕ್ಷಣ ತನಿಖೆ ಕೈಗೊಂಡಿತು. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ, ಸಾರ್ವಜನಿಕರು ತೆಗೆದಿದ್ದ ಛಾಯಾಚಿತ್ರಗಳು ಹಾಗೂ ತಾಂತ್ರಿಕ ಮಾಹಿತಿಗಳ ವಿಶ್ಲೇಷಣೆಯ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು.

ಬಂಧಿತನನ್ನು ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ನಿವಾಸಿ ಹೇಮಂತ ಶೆಟ್ಟಿ (40)ಎಂದು ಗುರುತಿಸಲಾಗಿದೆ. ಆರೋಪಿಯಿಂದ 3.910 ಗ್ರಾಂ ತೂಕದ ಚಿನ್ನದ ಉಂಗುರ, 3.450 ಗ್ರಾಂ ತೂಕದ ಬಳೆ ಹಾಗೂ 7.160 ಗ್ರಾಂ ತೂಕದ ಚಿನ್ನದ ಸರ ಸೇರಿದಂತೆ ಒಟ್ಟು ಸುಮಾರು ₹2.07 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,  ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article