ಅಪಘಾತದ ವೇಳೆ ಶವದ ಆಭರಣ ದೋಚಿದ ಬಗ್ಗೆ ದೂರು ದಾಖಲು
ಕುಂದಾಪುರ: ರಸ್ತೆ ಅಪಘಾತದಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದವರನ್ನು ರಕ್ಷಿಸಬೇಕಾದ ಸಮಯದಲ್ಲಿ, ಮೃತದೇಹದ ಮೇಲಿದ್ದ ಚಿನ್ನಾಭರಣವನ್ನೇ ದೋಚಿರುವ ಅಮಾನವೀಯ ಮತ್ತು ಅತ್ಯಂತ ನೀಚ ಕೃತ್ಯವೊಂದು ಕೊಲ್ಲೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ:
ಮೇ 17ರ ಭಾನುವಾರ ಮಧ್ಯಾಹ್ನ ಕೊಲ್ಲೂರು ದಳಿ ಎಂಬಲ್ಲಿ ಕೊಡಚಾದ್ರಿಯಿಂದ ಕೇರಳದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಜೀಪಿನಲ್ಲಿದ್ದ ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಕೇರಳ ಮೂಲದ ಜ್ಯೋತಿ ಹಾಗೂ ಅರಿಯಾ ಅನೂಫ್ ಎಂಬಿಬ್ಬರು ಮಹಿಳೆಯರು ಮೃತಪಟ್ಟಿದ್ದರು.
ಅಪಘಾತ ನಡೆದ ತಕ್ಷಣ ಸ್ಥಳದಲ್ಲಿ ಗಾಯಾಳುಗಳ ಕಿರುಚಾಟ, ಆಕ್ರಂದನ ಹಾಗೂ ಸ್ಥಳೀಯರ ಗೊಂದಲಗಳು ಸೇರಿ ಭೀಬತ್ಸ ವಾತಾವರ್ಣ ನಿರ್ಮಾಣವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ತಮ್ಮ ವಿಕೃತ ಬುದ್ಧಿ ಪ್ರದರ್ಶಿಸಿದ್ದಾರೆ. ಮೃತ ಮಹಿಳೆ ಜ್ಯೋತಿ ಅವರ ಮೈಮೇಲಿದ್ದ ಸುಮಾರು 18 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಖದೀಮರು ಅತ್ಯಂತ ಚಾಣಾಕ್ಷತನದಿಂದ ಕಳವು ಮಾಡಿದ್ದಾರೆ. ಅಪಘಾತ ನಡೆದ ಸ್ಥಳದಿಂದ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸುವ ಗಡಿಬಿಡಿಯ ಸಂದರ್ಭದಲ್ಲೇ ಖದೀಮರು ಕೈ ಚಳಕ ತೋರಿದ್ದಾರೆ ಎನ್ನಲಾಗಿದೆ.
ಈ ದುರ್ಘಟನೆ ನಡೆದು ಒಂದು ವಾರದ ನಂತರ ಮೃತಳ ಕುಟುಂಬದವರಿಗೆ ಶವದ ಮೈ ಮೇಲಿದ್ದ ಆಭರಣಗಳು ಕಾಣೆಯಾಗಿರುವುದರ ಅರಿವಾಗಿದೆ. ಇದೀಗ ಕುಟುಂಬದವರು ಕೊಲ್ಲೂರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ವಿಷಮ ಸನ್ನಿವೇಶದಲ್ಲಿ ಸಹಾಯ ಮಾಡಬೇಕಾದ ಜನರು ಈ ನಮೂನೆ ವಿಕೃತಿ ಮೆರೆದಿರುವುದು ಸ್ಥಳೀಯರಲ್ಲಿ ತೀವ್ರ ಆಕ್ರೋಶ ಉಂಟುಮಾಡಿದೆ.