ಕುಂದಾಪ್ರದವರು ತಾಮ್ಮೊಂದಿಗೆ ಬಂದವರಣ್ಣೆಂದು ಕೈ ಬಿಡುವುದಿಲ್ಲ: ಡಾ. ಅಣ್ಣಯ್ಯ ಕುಲಾಲ್
ಕೋಟದಲ್ಲಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ 'ಕಾಂಬ'
ಕುಂದಾಪುರ: ಕುಂದಾಪುರದ ಜನರು ತಮ್ಮ ವಿಶಾಲ ಮನೋಭಾವದಿಂದ ವಿಶಿಷ್ಟ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ತಮ್ಮೊಂದಿಗೆ ಬಂದವರನ್ನು ಅವರು ಎಂದಿಗೂ ಕೈ ಬಿಡುವುದಿಲ್ಲ. ನಂಬಿ ಬಂದವರನ್ನು ಬೆಳೆಸುವುದೇ ಕುಂದಾಪುರದವರ ಯಶಸ್ಸಿನ ಗುಟ್ಟು ಎಂದು ಮಂಗಳೂರಿನ ಖ್ಯಾತ ವೈದ್ಯ ಅಣ್ಣಯ್ಯ ಕುಲಾಲ್ ಹೇಳಿದರು.
ಕೋಟದ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮಪಂಚಾಯತ್, ಗೀತಾನಂದ ಫೌಂಡೇಶನ್, ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕುಂದಾಪ್ರ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಮಂಗಳೂರಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮತ್ತು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮಾಹಿತಿ ಕೇಂದ್ರ ಕೋಟತಟ್ಟು ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೋಟದ ಕಾರಂತ ಥೀಂ ಪಾರ್ಕಿನಲ್ಲಿ ಕೆ.ಸಿ. ಕುಂದರ್ ಸ್ಮರಣೆಯಲ್ಲಿ ನಡೆದ ಆರನೇ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ 'ಕಾಂಬ'ವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ಮುಂಚೂಣಿಯಲ್ಲಿ ಇರುವವರು ಕುಂದಾಪ್ರದವರು. ಅಲ್ಲಿನ ದೊಡ್ಡ ದೊಡ್ಡ ವೈದ್ಯರು, ಲೆಕ್ಕಪರಿಶೋಧಕರು ಇನ್ನುಳಿದ ಉನ್ನತ ಹುದ್ದೆಯಲ್ಲಿರುವವರು ಮೂಲತಃ ಕುಂದಾಪ್ರದವರು. ಕುಂದಾಪ್ರ ಭಾಗದವರು ಊರಿನಲ್ಲಿದ್ದಾಗ ಸಾಮಾನ್ಯರಲ್ಲಿ ಸಾಮಾನ್ಯರಂಟಿಯೇ ಇರುತ್ತಾರೆ. ಅವರ ಮೌಲ್ಯ ಅರಿವಾಗುವುದು ಅವರು ಬೇರೆ ಊರಿನಲ್ಲಿದ್ದಾಗ ಎಂದು ಅವರು ಕುಂದಾಪ್ರ ಜನರ ಹೆಚ್ಚುಗಾರಿಕೆಯನ್ನು ವಿವರಿಸಿದರು.
ಸಮ್ಮೇಳನಾಧ್ಯಕ್ಷರಾಗಲು ಪಿಎಚ್‌ಡಿ ಮಾಡಬೇಕಿಲ್ಲ. ಈ ಬಾರಿಯ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇದು ಎಲ್ಲರಿಗೂ ಮಾದರಿ. ಓರ್ವ ವ್ಯಕ್ತಿ ಭಾಷೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳೇ ಸಾಕು ಎನ್ನುವುದಕ್ಕೆ ಇದೇ ಉದಾಹರಣೆ ಎಂದು ಕುಲಾಲ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ತಮಾಷೆಗಾಗಿ ಕುಂದಾಪ್ರ ಭಾಷೆ ಸೀಮಿತವಾಗಬಾರದು. ಕುಂದಾಪ್ರ ಭಾಷೆಯಲ್ಲಿ ಅದ್ಬುತ ಜ್ಞಾನ ಭಂಡಾರವಿದೆ. ನಾವಾಡುವ ಭಾಷೆಯನ್ನು ಸಹಜವಾಗಿ ಬಳಸಿದರೆ ಭಾಷೆಯು ಉಳಿಯುತ್ತದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ್ ಮಾತನಾಡಿ, ನಮ್ಮ ಭಾಷೆ ಅಳಿಯುವದಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ಪೋಷಕರು ಮಕ್ಕಳಿಗೆ ಕುಂದಾಪ್ರ ಕನ್ನಡವನ್ನು ಮಾತನಾಡಲು ಪ್ರೇರೆಪಿಸಬೇಕು ಎಂದರು.
ಸಮ್ಮೇಳನಾಧ್ಯಕ್ಷತೆಯನ್ನು ಚೇತನ್ ನೈಲಾಡಿ ವಹಿಸಿದ್ದರು, ಈ ಸಂದರ್ಭ ವೇದಿಕೆಯಲ್ಲಿ ಸುಬ್ರಾಯ ಆಚಾರ್ ಉಪಸ್ಥಿತರಿದ್ದರು.
ಶಿಕ್ಷಕ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು, ಸೃಷ್ಟಿ, ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಶಾಶ್ವತ್ ವಂದಿಸಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮ ಸಂಯೋಜಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು. ಸಂವಾದದಲ್ಲಿ ಕುಂದಾಪ್ರ ಕನ್ನಡ ಆಚರಣೆಗಳ ಬಗ್ಗೆ, ಪ್ರತಿ ಆಚರಣೆಗೂ ಬಳಸುತ್ತಿದ್ದ ಹಾಡುಗಳ ಬಗ್ಗೆ ಸಮ್ಮೇಳನಾಧ್ಯಕ್ಷರು ಮಾತನಾಡಿದರು. ಮಾತೃ ಭಾಷೆಯ ಮೇಲೆ ಅಭಿಮಾನ ಬೇಕಿಲ್ಲ. ಅದು ನಮ್ಮ ತಾಯಿ ಭಾಷೆ, ಎಷ್ಟೇ ದೇಶ ಸುತ್ತಿದರೂ ತಾಯಿ ಭಾಷೆ ಮಾತನಾಡಿದರೆ ಮಾತ್ರ ನೆಮ್ಮದಿ ಸಿಗುತ್ತದೆ ಎಂದರು. ಈ ಸಂವಾದದಲ್ಲಿ ಜ್ಯೋತಿ ಸಾಲಿಗ್ರಾಮ, ರವಿ ತಂತ್ರಾಡಿ, ಮಂಜುಳಾ ತೆಕ್ಕಟ್ಟೆ, ಸಂಕೇತ ಕುಲಾಲ್ ಸಮನ್ವಯಕಾರರಾಗಿ ಭಾಗವಹಿಸಿದ್ದರು.