ಕೋಟ ಮೆಸ್ಕಾಂ ಜನಸಂಪರ್ಕ ಸಭೆ: ಮೆಸ್ಕಾಂ ತಾರತಮ್ಯ ನೀತಿ ಬಗ್ಗೆ ಗ್ರಾಹಕರ ಆಕ್ರೋಶ
ಕೋಟತಟ್ಟು ಗ್ರಾಮಪಂಚಾಯತ್ ಮಾಜಿ ಸದಸ್ಯ ರವೀಂದ್ರ ತಿಂಗಳಾಯ ಸಹಿತ ಹಲವರು ಬಿಲ್ ಹಿಡಿದು ಪ್ರತಿಭಟಿಸಿ ಮೆಸ್ಕಾಂ ಪ್ರಸ್ತುತ ಸರಕಾರ ಗೃಹಜ್ಯೋತಿ ಯೋಜನೆಯ ನೆಪದಲ್ಲಿ ಗ್ರಾಹಕರಿಗೆ ಬರೆ ಎಳೆಯುತ್ತಿದೆ. ಗಲು ದರೋಡೆ ರೀತಿಯಲ್ಲಿ ಇದೊಂದು ರೀತಿಯ ಡಿಜಿಟಲ್ ಹಗರಣ. ಸರ್ಕಾರ ಈ ನಮೂನೆಯ ಹಗಲು ದರೋಡೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಆಕ್ರೋಶ ಹೊರಹಾಕಿದ ಗ್ರಾಹಕರು ಪ್ರಸ್ತುತ ಸಭೆಯಲ್ಲೇ ಈ ಸಮಸ್ಯೆಗೆ ಪರಿಹಾರ ದೊರೆಯಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಮೆಸ್ಕಾಂ ಜಿಲ್ಲಾ ಅಧೀಕ್ಷಕ ಇಂಜಿನಿಯರ್ ಬಿ.ರಾಕೇಶ್ ಪ್ರತಿಕ್ರಿಯಿಸಿ, ಮೆಸ್ಕಾಂ ಮೇಲಧಿಕಾರಿಗಳಿಗೆ ಪತ್ರಬರೆದು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗ್ರಾಹಕರನ್ನು ಸಮಾಧಾನ ಪಡಿಸಿದರು.
ಮೆಸ್ಕಾಂ ನವರ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೇಸತ್ತ ಸಾಮಾಜಿಕ ಕಾರ್ಯಕರ್ತರಾದ ನಾಗರಾಜ ಗಾಣಿಗ ಮತ್ತು ಸುರೇಶ್ ಗಿಳಿಯಾರ್, ಮನೆಯೊಳಗೂ ಕರೆಂಟ್ ಇಲ್ಲದೇ ಉರಿ, ಹೊರಗೆ ಏರಿದ ತಾಪಮಾಣದಿಂದ ಧಗೆ. ಪ್ರತಿ ಮಂಗಳವಾರ ಹೆದ್ದಾರಿ ಕಾಮಗಾರಿ ನೆಪದಲ್ಲಿ ಕರೆಂಟ್ ತೆಗೆಯಲಾಗುತ್ತದೆ. ಹೀಗೆಕೆ ಮಾಡುತ್ತೀರಿ? ಹಾಗಾದರೆ ಕೋಟ ಹೋಬಳಿ ವ್ಯಾಪ್ತಿಯಲ್ಲಿ ಪ್ರತಿ ಮಂಗಳವಾರ ವಿದ್ಯುತ್ ಇಲ್ಲದ ದಿನವೆಂದು ಘೋಷಣೆ ಮಾಡಿ ಎಂದು ಆಗ್ರಹಿಸಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೀಗಾಗದಂತೆ ಕ್ರಮ ವಹಿಸುವುದಾಗಿ ಮೆಸ್ಕಾಂ ಅಧಿಕಾರಿಗಳು ಸಮಜಾಯಿಷಿ ನೀಡಿದರು.
ಟಿ.ಸಿ. ಸ್ಥಳಾಂತರದ ವಿರುದ್ಧ ಆಕ್ರೋಶ:
ಕೋಟ ಹನುಮಾನ್ ಬಟ್ಟೆ ಮಳಿಗೆ ಎದುರು ಇರುವ ಟ್ರಾನ್ಸ್ಫಾರ್ಮರನ್ನು (ಟಿ.ಸಿ) ಕೋಟ ಗ್ರಾಮಪಂಚಾಯತ್ ಕುಡಿಯುವ ನೀರಿನ ಘಟಕದ ಸಮೀಪ ಸ್ಥಳಾಂತರಿಸಲಾಗಿದೆ. ಬಟ್ಟೆ ಮಳಿಗೆಯವರಿಗೆ ಖಾಸಗಿಯಾಗಿ ಟಿ ಸಿ ಅಳವಡಿಸಲಾಗಿದೆ. ಗ್ರಾಹಕರ ಸ್ವಂತ ಸ್ಥಳದಲ್ಲಿ ಅಳವಡಿಸಬೇಕು ಎಂಬ ನಿಯಮ ಮೀರಿ, ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸ್ಥಳದಲ್ಲಿ ಟಿ ಸಿ ಅಳವಡಿಸಲಾಗಿದೆ. ಜವಳಿ ಮಳಿಗೆಯವರು ಏನಅಧಿಕೃತವಾಗಿ ಕಟ್ಟಡದ ಮಹಡಿಗಳನ್ನು ಹೆಚ್ಚಿಸಿ, ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು. ಮಾತ್ರವಲ್ಲ, ಮಳಿಗೆಗೆ ವಿದ್ಯುತ್ ಸಂಪರ್ಕ ನೀಡಿದ ಮೆಸ್ಕಾಂ ಧೋರಣೆಯನ್ನು ಖಂಡಿಸಿ, ಹಣ ಇದ್ದವರಿಗೊಂದು ನ್ಯಾಯ ಬಡವರಿಗೊಂದು ನ್ಯಾಯ ಮೆಸ್ಕಾಂನಲ್ಲಿ ನಡೆಯುತ್ತಿದೆಯೇ ಎಂದು ಹರಿಹಾಯ್ದರು. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಕೂಡಲೇ ದಂಡ ವಿಧಿಸಿ ಅಕ್ರಮ ಸಂಪರ್ಕ ತೆರವುಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಸುರೇಶ್ ಗಿಳಿಯಾರು ಮತ್ತು ನಾಗರಾಜ್ ಗಾಣಿಗ ಆಗ್ರಹಿಸಿದರು.
ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಮೆಸ್ಕಾಂ ಅಧೀಕ್ಷಕರು ಕೋಟ ಮೆಸ್ಕಾಂ ಇಂಜಿನಿಯರ್ ಪ್ರಶಾಂತ್ ಶೆಟ್ಟಿಯವರಿಗೆ ಸೂಚಿಸಿದರು.
ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಕಾಮಗಾರಿ ನಡೆಯುತ್ತಿದ್ದು ಚೇಂಪಿ ಸಮೀಪದ ಡಿವೈನ್ ಪಾಕ್೯ ಎದುರು ಮೆಸ್ಕಾಂ ಅಂಡರ್ ಗ್ರೌಂಡ್‌ನಲ್ಲಿ ಕೇಬಲ್ ಅಳವಡಿಸಲಾಗಿದೆ. ಇದು ಸರಿಯೇ ಎಂದು ಪ್ರಶ್ನಿಸಿದ ನಾಗರಾಜ ಗಾಣಿಗ ಅಲ್ಲೆ ಸಮೀಪದ ಕಟ್ಟದ ಎದುರು ಓಪನ್ ಕೇಬಲ್ ಅಳವಡಿಸಲಾಗಿದೆ. ಡಿವೈನ್ ಪಾಕ್೯ನವರಿಗೆ ಅಂಡರ್ ಗ್ರೌಂಡ್‌ನಲ್ಲಿ ಅಳವಡಿಸಲಾಗಿದೆ. ಈ ರೀತಿ ತಾರತಮ್ಯ ಕ್ರಮ ಯಾಕೆ ಎಂದು ಪ್ರಶ್ನಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಮೆಸ್ಕಾಂ ಅಧೀಕ್ಷಕ ರಾಕೇಶ್ ಕುಮಾರ್ ಉತ್ತರಿಸಿದರು.
ಸಭೆಯಲ್ಲಿ ಕುಂದಾಪುರ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ,ಕುಂದಾಪುರ ಉಪ ವಿಭಾಗದ ಲೆಕ್ಕಾಧಿಕಾರಿ ಶಿವ ಕುಮಾರ್, ಕೋಟ ವಿಭಾಗದ ಸಹಾಯಕ ಕಾರ್ಯವಾಹಕ ಇಂಜಿನಿಯರ್ ಪ್ರತಾಪ್‌ಚಂದ್ರ ಶೆಟ್ಟಿ, ಸಹಾಯಕ ಇಂಜಿನಿಯರ್ (ತಾಂತ್ರಿಕ) ಶ್ರೀಕಾಂತ್, ಕೋಟ ಮೆಸ್ಕಾಂ ಇಂಜಿನಿಯರ್ ಪ್ರಶಾಂತ್ ಶೆಟ್ಟಿ, ವಿವಿಧ ಶಾಖಾಧಿಕಾರಿಗಳಾದ ಮಹೇಶ್, ವೈಭವ್ ಶೆಟ್ಟಿ, ಕೋಟ ಉಪವಿಭಾಗದ ಲೆಕ್ಕಾಧಿಕಾರಿ ಕೆ.ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.