ಜು.15 ರೊಳಗೆ ಕಡಂದಲೆ 400 ಕೆ.ವಿ ಉಪಕೇಂದ್ರ ಕಾಮಗಾರಿ ಪೂರ್ಣ ಗುರಿ

ಜು.15 ರೊಳಗೆ ಕಡಂದಲೆ 400 ಕೆ.ವಿ ಉಪಕೇಂದ್ರ ಕಾಮಗಾರಿ ಪೂರ್ಣ ಗುರಿ


ಮಂಗಳೂರು: ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಕರಾವಳಿ ಭಾಗದ ಜಿಲ್ಲೆಗಳಿಗೆ ತಡೆರಹಿತ, ಉತ್ತಮ ಗುಣಮಟ್ಟದ ವಿದ್ಯುತ್ ಸೌಲಭ್ಯ ಒದಗಿಸುವ ’ಕಡಂದಲೆ 400 ಕೆವಿ ವಿದ್ಯುತ್ ಉಪಕೇಂದ್ರ’ ಕಾಮಗಾರಿಯನ್ನು ಜು.15 ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಭೂವ್ಯಾಜ್ಯದ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲ್ಲೂಕಿನ ಕಡಂದಲೆ ಗ್ರಾಮದಲ್ಲಿ 400 ಕೆವಿ ಲೈನ್ ಕಾಮಗಾರಿ ಸ್ಥಗಿತಗೊಂಡಿತ್ತು. ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಸತತ ಪ್ರಯತ್ನದಿಂದಾಗಿ ಈ ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ನಿವಾರಿಸಲಾಗಿದೆ. ಸಚಿವರ ನಿರ್ದೇಶನದ ಮೇರೆಗೆ ಬುಧವಾರ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಮಂಗಳೂರು ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದ್ದು, ತಡೆರಹಿತ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ಸಚಿವರ ನಿರ್ದೇಶನದಂತೆ ಮುಂಬರುವ ಮುಂಗಾರಿನೊಳಗೆ ಈ ಯೋಜನೆಯನ್ನು  ಮುಕ್ತಾಯಗೊಳಿಸಿ ವಿದ್ಯುತ್ ಪ್ರಸರಣ ಕಾರ್ಯ ಆರಂಭಿಸಲಾಗುವುದು" ಎಂದು ತಿಳಿಸಿದರು.

ವಿದ್ಯುತ್ ಸಮಸ್ಯೆಗೆ ಸಂಜೀವಿನಿ..

"ಪ್ರಮುಖ ಕೈಗಾರಿಕಾ ಹಬ್ಗಳಾಗಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ನಿರಂತರ ವಿದ್ಯುತ್ ಒದಗಿಸುವ ಪ್ರಮುಖ ಯೋಜನೆ ಇದಾಗಿದೆ. ಮಳೆಗಾಲದಲ್ಲಿ ಎದುರಾಗುತ್ತಿದ್ದ ವೋಲ್ಟೇಜ್ ವ್ಯತ್ಯಯ ಮತ್ತು ಕಡಿಮೆ ವೋಲ್ಟೇಜ್ ಸಮಸ್ಯೆಗೆ ಈ 400 ಕೆವಿ ಉಪಕೇಂದ್ರ ಶಾಶ್ವತ ಮುಕ್ತಿ ನೀಡಲಿದೆ. ಅಲ್ಲದೆ, ಯಾವುದೇ ಒಂದು ಸ್ಟೇಷನ್ ವ್ಯಾಪ್ತಿಯಲ್ಲಿ ತಾಂತ್ರಿಕ ದೋಷ ಉಂಟಾದಾಗ, ಈ ಉಪಕೇಂದ್ರದ ಮೂಲಕ ಪರ್ಯಾಯವಾಗಿ ಲೋಡ್ ತೆಗೆದುಕೊಂಡು ತಕ್ಷಣವೇ ವಿದ್ಯುತ್ ಮರುಸಂಪರ್ಕ ಕಲ್ಪಿಸುವುದು ಸುಲಭವಾಗಲಿದೆ. ಇದರಿಂದ ಕರಾವಳಿಯ ಪ್ರಮುಖ ಜಿಲ್ಲೆಗಳಿಗೆ ಗುಣಮಟ್ಟದ ವಿದ್ಯುತ್ ಲಭ್ಯವಾಗಲಿದೆ" ಎಂದು ಹೇಳಿದರು.

"ಈ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ, ಈಗಿರುವ 400 ಕೆವಿ ಯುಪಿಸಿಎಲ್-ಹೆಬ್ಬನಹಳ್ಳಿ ಪ್ರಸರಣ ಮಾರ್ಗದ ಮೇಲೆ ಮೇ 6 ರಿಂದ  ಮೇ 24 ರವರೆಗೆ ಮಾರ್ಗ ಮುಕ್ತತೆಯನ್ನು ಪಡೆಯಲು ನಿಗಮವು ನಿರ್ಧರಿಸಿದೆ. ಈ ಮಾರ್ಗ ಮುಕ್ತತೆಯ ಅವಧಿಯಲ್ಲಿ, ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪ್ರಸರಣ ಮಾರ್ಗದ ಮೇಲಿನ ಒತ್ತಡ ನಿಭಾಯಿಸಿ ಪರ್ಯಾಯ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ, ತಾಂತ್ರಿಕವಾಗಿ ಅನಿವಾರ್ಯವಾದರೆ ಮಾತ್ರ ಸೀಮಿತ ಅವಧಿಗೆ ವಿದ್ಯುತ್ ಕಡಿತ ಮಾಡಬೇಕಾದ ಸನ್ನಿವೇಶ ಉಂಟಾಗಬಹುದು. ಮಂಗಳೂರಿನ ದೀರ್ಘಕಾಲೀನ ವಿದ್ಯುತ್ ಭದ್ರತೆಯ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರು ಎಂದಿನಂತೆ ಸಹಕಾರ ನೀಡಬೇಕು" ಎಂದು ಮನವಿ ಮಾಡಿದ್ದಾರೆ.

ಯೋಜನೆಗೆ ಎದುರಾಗಿದ್ದ ಭೂವ್ಯಾಜ್ಯಗಳನ್ನು ಪರಿಹರಿಸಲು ಇಲಾಖಾ ಮಟ್ಟದಲ್ಲಿ ನಿರಂತರ ಪರಿಶೀಲನೆ ನಡೆಸಿ, ಶೀಘ್ರ ಹಾಗೂ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿದೆ. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲು ಕೆಪಿಟಿಸಿಎಲ್ಗೆ ಸೂಚನೆ ನೀಡಲಾಗಿದೆ ಎಂದು  ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದಶಿ ಗೌರವ್ ಗುಪ್ತ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article