ಎಂಆರ್‌ಪಿಎಲ್ ಮೂರನೇ ಹಂತದ ಯೋಜನೆ: 27 ಎಕರೆ ಭೂ ಸ್ವಾಧೀನ ಮಾಡಲು ಕೆಐಎಡಿಬಿಗೆ ಒಪ್ಪಿಗೆ: ಸಂಸದ ಬ್ರಿಜೇಶ್ ಚೌಟ ಸೂಚನೆ

ಎಂಆರ್‌ಪಿಎಲ್ ಮೂರನೇ ಹಂತದ ಯೋಜನೆ: 27 ಎಕರೆ ಭೂ ಸ್ವಾಧೀನ ಮಾಡಲು ಕೆಐಎಡಿಬಿಗೆ ಒಪ್ಪಿಗೆ: ಸಂಸದ ಬ್ರಿಜೇಶ್ ಚೌಟ ಸೂಚನೆ


ಮಂಗಳೂರು: ಎಂಆರ್‌ಪಿಎಲ್ ೩ನೇ ಹಂತದ ಯೋಜನೆಗೆ ಹಸಿರು ವಲಯ ನಿರ್ಮಿಸಲು ಜೋಕಟ್ಟೆಯ ಜನವಸತಿ ಪ್ರದೇಶದ 27 ಎಕರೆ ಭೂ ಸ್ವಾಧೀನ ಮಾಡಲು ಕೆಐಎಡಿಬಿಗೆ ಒಪ್ಪಿಗೆ ನೀಡಲಾಗಿದ್ದು, ಸಂತ್ರಸ್ತರಿಗೆ ಶೀಘ್ರ ನ್ಯಾಯಯುತ ಪರಿಹಾರ ಒದಗಿಸಿ ಭೂಸ್ವಾಧೀನ ಮಾಡುವಂತೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಸೂಚಿಸಿದರು.

ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಹಸಿರು ವಲಯಕ್ಕೆ ಗುರುತು ಮಾಡಲಾದ 27 ಎಕರೆ ಜಮೀನನ್ನು ಕಂಪೆನಿ ನೇರ ಖರೀದಿಸುವುದು, ಜಿಲ್ಲಾಧಿಕಾರಿ ಅಧೀನದ ಸಮಿತಿಯಿಂದ ಭೂಸ್ವಾಧೀನಗೊಳಿಸುವುದು, ಕೆಐಡಿಬಿಯಿಂದ ಸ್ವಾಧೀನ ಮಾಡುವುದು ಈ ಮೂರು ಮಾದರಿಗಳ ಸಾಧಕ ಬಾಧಕಗಳನ್ನು ಜಿಲ್ಲಾಧಿಕಾರಿಗಳು ಸಭೆಯ ಮುಂದೆ ವಿವರಿಸಿದರು. 

ಸ್ಥಳೀಯರಿಗೆ ಮತ್ತು ಹೋರಾಟಗಾರರಿಗೆ ತಪ್ಪು ಮಾಹಿತಿ ಹೋಗಿರುವುದು. ಹಾಗೆಯೇ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಭೂಸ್ವಾಧೀನದಿಂದ ಜನರಿಗಾಗುವ ಲಾಭವೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ವಿವರಿಸಿದರು. 

ಸಂತ್ರಸ್ತರು ಎಲ್ಲ ದಾಖಲೆಗಳನ್ನು ಶೀಘ್ರವಾಗಿ ಸಲ್ಲಿಸಬೇಕು. 8 ತಿಂಗಳೊಳಗೆ ಕೆಐಎಡಿಬಿಯ ಎಲ್ಲ ಪ್ರಕ್ರಿಯೆಗಳೂ ಮುಗಿಯುತ್ತದೆ ಎಂದರು. 

ಕೂಡಲೇ ಪ್ರಕ್ರಿಯೆಯನ್ನು ಪ್ರಾರಂಭಿಸಿ ಶೀಘ್ರಗತಿಯಲ್ಲಿ ಭೂಸ್ವಾಧೀನ ಮಾಡುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. 

ಕೆಐಎಡಿಬಿಯಿಂದ ಭೂಸ್ವಾಧೀನದ ಕಾನೂನು ಪ್ರಕ್ರಿಯೆಯಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತು. 

ನೇರ ಖರೀದಿಯ ಕಾರಣಕ್ಕೆ ಏಕಗಂಟಿನ ಪರಿಹಾರಕ್ಕೆ ಸಂತ್ರಸ್ತರು ಒಪ್ಪಿಗೆ ಸೂಚಿಸಿದ್ದು, ಈಗ ಭೂಸ್ವಾಧೀನ ಪ್ರಕ್ರಿಯೆ ತಡ ಆಗುತ್ತಿರುವುದು, ಕೆಐಎಡಿಬಿ ಮೂಲಕ ಈಗ ಸ್ವಾಧೀನ ನಡೆಯುತ್ತಿರುವುದರಿಂದ ಎಮ್‌ಆರ್ ಪಿಎಲ್ ನ ನಾಲ್ಕನೆ ಹಂತದ ಭೂಸ್ವಾಧೀನಕ್ಕೆ ಪೆರ್ಮುದೆ ಗ್ರಾಮಸ್ಥರಿಗೆ ಸಿಗುವ ಪುನರ್ವಸತಿ ಪ್ಯಾಕೇಜ್ ನಲ್ಲಿರುವ ಎಲ್ಲಾ ಅಂಶಗಳನ್ನು ಜೋಕಟ್ಟೆ ಸಂತ್ರಸ್ತರಿಗೂ ಒದಗಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದರು. 

ನಾಲ್ಕನೆ ಹಂತದ ಭೂಸ್ವಾಧೀನ ಪ್ಯಾಕೇಜ್ ನಲ್ಲಿ ಇರುವ 18 ತಿಂಗಳ ಮನೆ ಬಾಡಿಗೆಯನ್ನು ಜೋಕಟ್ಟೆಯವರಿಗೆ ಒದಗಿಸಬೇಕು, ಕುಸಿಯವ ಹಂತದಲ್ಲಿ ಇರುವ ಮನೆಗಳ ನಿವಾಸಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು. 

ಜಿಲ್ಲಾಡಳಿತವೇ ಮಧ್ಯಸ್ಥಿಕೆ ವಹಿಸಿ ಏಕಗಂಟಿನ ಪರಿಹಾರ ವಿತರಿಸಬೇಕು. ಇತರ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕು ಎಂದು ಸಭೆಯಲ್ಲಿ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರು ಆಗ್ರಹಿಸಿದರು. 

ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ಶಾಸಕ ಉಮನಾಥ್ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಶೀಘ್ರವಾಗಿ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುತ್ತೇವೆ ಎಂದು ಸಂತ್ರಸ್ತರಿಗೆ ಭರವಸೆ ನೀಡಿದರು. 

ಎಂಆರ್‌ಪಿಎಲ್ ಎಂಡಿ ಕಾಮತ್ ಅಪರ ಡಿಸಿ ರಾಜು ಕೆ., ಎಂಆರ್ಪಿಎಲ್ ಎಂಡಿ ಎಂ.ಎಸ್. ಕಾಮತ್, ಅಧಿಕಾರಿಗಳಾದ ಗೋಕುಲ್‌ದಾಸ್ ನಾಯಕ್, ಮೇಘನಾ , ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಜೋಕಟ್ಟೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸಂಶುದ್ದೀನ್, ವಿಜಯ ಕುಮಾರ್, ಶ್ರೀನಾಥ್, ಮಹಮ್ಮದ್ ಜಾಬೀರ್, ಜಯಂತ್, ಮನೋಜ್ ಮತ್ತಿತರರು ಸಭೆಯಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article