ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ: ಸತೀಶ್ ಕುಂಪಲ

ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ: ಸತೀಶ್ ಕುಂಪಲ


ಮಂಗಳೂರು: ರಾಜ್ಯದಲ್ಲಿ ಪ್ರತಿದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆಯೇ ಚರ್ಚೆ ನಡೆಯುತ್ತಿದೆಯೇ ಹೊರತು ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತಿಲ್ಲ. ಸಿದ್ದರಾಮಯ್ಯ ಅವರ ಬಳಿಕ ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ್, ಈಗ ಮಲ್ಲಿಕಾರ್ಜುನ ಖರ್ಗೆ ಅವರು, ‘ನಾನು ಮುಂದಿನ ಸಿಎಂ ಆಗಬಹುದು’ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡುವೆ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಮೂರು ವರ್ಷವಾಗುತ್ತಿದೆ. ಈ ಮೂರು ವರ್ಷದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಅಧಿಕಾರಕ್ಕಾಗಿ ಪ್ರತಿದಿನ ದೆಹಲಿ ಯಾತ್ರೆ ನಡೆಯುತ್ತಿದೆ. ಆದರೆ, ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಆಗುತ್ತಿಲ್ಲ. ಜನಪರ ಆಡಳಿತ ಹುಸಿಯಾಗಿದೆ. ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಜನರಿಗೆ ಉಚಿತ ನಾಟಕದ ಪ್ರದರ್ಶನ ದೊರೆಯುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಟೀಕಿಸಿದರು.

ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪವಾಗಿ ತಲುಪುತ್ತಿಲ್ಲ. ಗೃಹಲಕ್ಷ್ಮಿ ಹಣವನ್ನು ಮಹಿಳೆಯರಿಗೆ ಸಮಯಕ್ಕೆ ಸರಿಯಾಗಿ ಪಾವತಿಸದೇ ಸತಾಯಿಸಲಾಗುತ್ತಿದೆ. ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ವಿದ್ಯುತ್ ದರ ಹೆಚ್ಚಿಸಲಾಗಿದೆ. ವಿದ್ಯಾನಿಧಿ ನೀಡುತ್ತಿಲ್ಲ, ಸರಕಾರಿ ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಓಡಾಟ ನಡೆಸುತ್ತಿಲ್ಲ. ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ ಎಂದು ಹೇಳಿದರು.

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯಲ್ಲಿ ಮುಸಲ್ಮಾನರು ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಮುಸಲ್ಮಾನರಿಗೆ ಕ್ಯಾಬಿನೆಟ್ ಸಭೆಯಲ್ಲಿ 600 ಕೋಟಿ ರೂ. ನೀಡಲಾಗಿದೆ. ಆ ಮೂಲಕ ಕಾಂಗ್ರೆಸ್ ಸರಕಾರ ಒಂದು ವರ್ಗದ ಸರಕಾರ ಎಂಬುದು ಸಾಬೀತಾಗಿದೆ. ಇನ್ನೊಂದೆಡೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಲಾಗಿದೆ. ಓಲೈಕೆ ರಾಜಕಾರಣದ ನಡುವೆ ಆಡಳಿತ ಸಂಪೂರ್ಣ ಕುಸಿತಗೊಂಡಿದೆ ಎಂದು ಕುಂಪಲ ಆಪಾದಿಸಿದರು.

ಸರ್ವರ್ ಸಮಸ್ಯೆ ಕಾರಣದಿಂದ ಕಂದಾಯ ಇಲಾಖೆ ಸ್ತಬ್ದವಾಗಿದೆ. ಮನೆ ತೆರಿಗೆ ಪಾವತಿಸಲು, ಜನನ-ಮರಣ ಪ್ರಮಾಣಪತ್ರ ಪಡೆಯಲೂ ಸರ್ವರ್ ಸಮಸ್ಯೆ ಉಂಟಾಗಿದೆ. ಬಡಜನರ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಮಾಪಕರು ಕಳೆದ 55 ದಿನಗಳಿಂದ ಮುಷ್ಕರ ನಡೆಸುತ್ತಿದ್ದು, 15 ಸಾವಿರ ಅರ್ಜಿಗಳು ವಿಲೇವಾರಿ ಆಗದೇ ಬಾಕಿಯಾಗಿವೆ. 11 ಇ ನಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ. ಭೂಮಾಪಕ ಮುಷ್ಕರದಿಂದ ಸಮಸ್ಯೆ ಗಂಭೀರವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಈ ಬಗ್ಗೆ ಗಮನ ನೀಡುತ್ತಿಲ್ಲ. ಜನಸಾಮಾನ್ಯರ ಈ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ಕುಂಪಲ ಆಗ್ರಹಿಸಿದರು.

ಗ್ರಾಪಂಗಳಲ್ಲಿ ಕಳೆದ ಮೂರು ತಿಂಗಳಿನಿಂದ 9/11 ಸಮಸ್ಯೆ ಮುಂದುವರೆದಿದೆ. ಸರ್ವರ್ ಸಮಸ್ಯೆ ಜತೆಗೆ ತಾಪಂ ಕಾರ್ಯನಿರ್ವಹಣಾಽಕಾರಿಗಳಿಂದ ಅನುಮೋದನೆ ಪಡೆಯಬೇಕು ಎಂಬ ನಿಯಮ ಜನತೆಯನ್ನು ಕಂಗೆಡಿಸಿದೆ. ಗ್ರಾಪಂ ಚುನಾಯಿತ ಸದಸ್ಯರ ಅವಧಿ ಪೂರ್ಣಗೊಂಡಿದ್ದು, ಸರಕಾರ ಚುನಾವಣೆ ನಡೆಸುತ್ತಿಲ್ಲ. ಗ್ರಾಪಂಗಳಲ್ಲಿ ಅಧಿಕಾರಿಗಳು ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ. ರಾಜ್ಯದಿಂದ ಸಮರ್ಪಕವಾಗಿ ಅಂಕಿಅಂಶ ಸಲ್ಲಿಕೆಯಾಗದ ಕಾರಣ ಕಳೆದ ವರ್ಷ 15ನೇ ಹಣಕಾಸು ಯೋಜನೆ ಅನುದಾನ ಸಿಕ್ಕಿರಲಿಲ್ಲ. ಈಗ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಗ್ರಾಪಂಗಳಿಗೆ ಹಣಕಾಸು ಯೋಜನೆ ಅನುದಾನ ಸಿಗಲಾರದು. ರಾಜ್ಯ ಸರಕಾರವೂ ಗ್ರಾಪಂಗಳಿಗೆ ಹಣ ನೀಡುತ್ತಿಲ್ಲ. ಹೊಸ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಬಿಪಿಎಲ್ ಕಾರ್ಡ್ ದೊರೆಯುತ್ತಿಲ್ಲ. ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕೋವಿ ಪರವಾನಗಿ ನವೀಕರಣ ಆಗುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆರೋಪಗಳ ಸುರಿಮಳೆಗೈದರು.

ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಹಿಂದುಳಿದ ವರ್ಗಗಳ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಯುವ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಸಂಜಯ ಪ್ರಭು, ವಸಂತ ಪೂಜಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article