ಆಧುನಿಕ ಬ್ಯಾಂಕಿಂಗ್ ಜೊತೆಗೆ ಸಮಾಜಮುಖಿ ಚಟುವಟಿಕೆಯಲ್ಲೂ ವಿಶ್ವಕರ್ಮ ಬ್ಯಾಂಕ್ ಮುಂಚೂಣಿ: ಸಿಎ ಶಾಂತಾರಾಮ ಶೆಟ್ಟಿ
ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ವಿಶ್ವಕರ್ಮ ಸಹಕಾರ ಬ್ಯಾಂಕಿನ ಸ್ವರ್ಣ ಜಯಂತಿ ವರ್ಷದ ಮುಂದಿನ ಹಂತದ ಕಾರ್ಯಕ್ರಮಗಳ ಚಾಲನೆ, ಸಂಸ್ಥಾಪನಾ ದಿನಾಚರಣೆ ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ ಉತ್ಪನ್ನಗಳ ಬಿಡುಗಡೆ ಹಾಗೂ ಸದಸ್ಯರ ಕೌಶಲ್ಯಾಭಿವೃದ್ಧಿ ಯೋಜನೆಯ ಚಾಲನೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಐವತ್ತು ವರ್ಷಗಳ ಹಿಂದೆ ಬಿ. ಹರೀಶ್ಚಂದ್ರ ಆಚಾರ್ಯ ಅವರು ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಸಹಯೋಗದೊಂದಿಗೆ ನೆಟ್ಟ ಸಣ್ಣ ಸಸಿ ಇಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಎಂಬ ಹೆಸರಿನೊಂದಿಗೆ ವಿಶಾಲವಾಗಿ ಬೆಳೆದು ನಿಂತಿದೆ. ಮೂಲಭೂತವಾಗಿ ಒಂದು ಆರ್ಥಿಕ ಸಂಸ್ಥೆಯಾಗಿದ್ದರೂ, ಕೇವಲ ಹಣಕಾಸಿನ ವ್ಯವಹಾರವಷ್ಟೇ ಅಲ್ಲದೆ, ನಿರಂತರ ಸ್ವಚ್ಛ ಭಾರತ ಅಭಿಯಾನ, ಸದಸ್ಯರ ಮರಣ, ಅಪಘಾತ ಹಾಗೂ ಇನ್ನಿತರ ಸಂದರ್ಭದಲ್ಲಿ ಸಾಂತ್ವನ ಯೋಜನೆಯ ಹೆಸರಿನಲ್ಲಿ ನಿಧಿ ಸ್ಥಾಪಿಸಿ ಸಮಾಜಮುಖಿಯಾಗಿಯೂ ಮುಂಚೂಣಿಯಲ್ಲಿ ನಿಂತು ವಿಶ್ವಕರ್ಮ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಸ್.ಆರ್. ಹರೀಶ್ ಆಚಾರ್ಯ ಅವರು, ಬ್ಯಾಂಕಿನ ಸ್ವರ್ಣ ಜಯಂತಿ ಅಂಗವಾಗಿ ಪ್ರಸಕ್ತ ವರ್ಷ ಜಾರಿಗೆ ತರಲಾಗುವ ಹಲವಾರು ಗ್ರಾಹಕ-ಸದಸ್ಯ-ಸಿಬ್ಬಂದಿ ಕೇಂದ್ರಿತ ಯೋಜನೆಗಳ ಮಾಹಿತಿ ನೀಡಿದರು. ಜುಬಿಲಿಗಳು ಯಾವುದೇ ಸಂಸ್ಥೆಯ ಮರುನಿರ್ಮಾಣದ ಪ್ರಕ್ರಿಯೆಯ ಹಂತ. ಸಂಸ್ಥೆಯ ಅವಶ್ಯಕತೆಯನ್ನು ಅನುಸರಿಸಿ ಜ್ಯುಬಿಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಈ ಕಾರ್ಯಕ್ರಮಗಳ ಮೂಲಕ ಸಂಸ್ಥೆಯ ವ್ಯವಹಾರಿಕ ಅಭಿವೃದ್ಧಿ ಮತ್ತು ಸದಸ್ಯರ ಕಲ್ಯಾಣದ ಉದ್ದೇಶವನ್ನು ಹೊಂದಿರಬೇಕಾಗುತ್ತದೆ. ಹಾಗಾಗಿ ವಿಶ್ವಕರ್ಮ ಸಹಕಾರ ಬ್ಯಾಂಕಿನ ಸ್ವರ್ಣ ಸಂಭ್ರಮದ ಮುಂದಿನ ಹಂತದ ಕಾರ್ಯಕ್ರಮಗಳ ಭಾಗವಾಗಿ ಸದಸ್ಯ-ಗ್ರಾಹಕ -ಸಿಬ್ಬಂದಿ ಕೇಂದ್ರಿತ ಚಟುವಟಿಕೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಮೂಡುಬಿದಿರೆ ಎನ್.ಎಸ್ ಪಾಲಿಟೆಕ್ನಿಕ್‌ನ ಉಪನ್ಯಾಸಕ ಡಾ. ಎಸ್.ಪಿ. ಗುರುದಾಸ್ ಮಾತನಾಡಿ, ಗ್ರಾಹಕರು ಬ್ಯಾಂಕಿಗೆ ಸಹಾಯ (ಹೆಲ್ಪ್) ಮತ್ತು ಭರವಸೆ(ಹೋಪ್) ಬಯಸಿ ಬರುತ್ತಾರೆ. ಅವರನ್ನು ಆದರದಿಂದ ಕಂಡು ಸಿಬ್ಬಂದಿಗಳು ಗ್ರಾಹಕರಿಗೆ ಕುಟುಂಬದ ವೈದ್ಯರಂತೆ ಸಲಹೆ ಮತ್ತು ನೆರವು ನೀಡಬೇಕು ಎಂದು ಹೇಳಿದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್ ರೈ ಮುಖ್ಯ ಅತಿಥಿಯಾಗಿ ಮಾತನಾಡಿ, ವಿಶ್ವಕರ್ಮ ಸಮುದಾಯದವರದ್ದು ಮಾನವೀಯ ಹೃದಯ ಎಂದು ಕೊಂಡಾಡಿದರು. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಸಹಕಾರ ಚಳವಳಿ ಬಲವಾಗಿ ಬೇರೂರಲು ಇಲ್ಲಿನ ಸಹಕಾರ ಸಂಘಗಳು ಜನರಿಗೆ ಒದಗಿಸುತ್ತಿರುವ ಆರ್ಥಿಕ ಶಕ್ತಿ ಹಾಗೂ ಸೇವೆಗಳು ಕಾರಣ. ದೇಶ-ವಿದೇಶಗಳ ಹಲವಾರು ಅಧ್ಯಯನ ಸಂಸ್ಥೆಗಳು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗೆ ಆಗಮಿಸಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಅಧ್ಯಯನ ಮಾಡಿ ಹೋಗುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಕಳೆದ ವರ್ಷ ಜಾರಿಗೆ ತರಲಾದ ತಲಾ 10,000 ರೂ.ಗಳ ಸದಸ್ಯರ ಮರಣ ಸಾಂತ್ವನ ನಿಧಿಯನ್ನು 14 ಫಲಾನುಭವಿಗಳಿಗೆ ಅರ್ಪಿಸಲಾಯಿತು. ಒಬ್ಬರಿಗೆ ಚಿಕಿತ್ಸಾ ವೆಚ್ಚ ಭರಿಸಲಾಯಿತು. ಬ್ಯಾಂಕಿನಿಂದ ಹೊರತರಲಾದ ಕ್ಯೂಆರ್ ಕೋಡ್, ಮೊಬೈಲ್ ಆಪ್, ಸದಸ್ಯರ ಕೌಶಲ್ಯಭಿವೃದ್ಧಿ ಯೋಜನೆಯನ್ನು ಬಿಡುಗಡೆ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್ ಹರೀಶ್, ಬ್ಯಾಂಕಿನ ಉಪಾಧ್ಯಕ್ಷ ಜಗದೀಶ್ ಆಚಾರ್ಯ ಪಡುಪಣಂಬೂರು, ವ್ಯವಸ್ಥಾಪಕ ನಿರ್ದೇಶಕ ವಸಂತ ಅಡ್ಯಂತಾಯ, ಬ್ಯಾಂಕಿನ ನಿರ್ದೇಶಕರಾದ ಭಾಸ್ಕರ ಆಚಾರ್ಯ ಡಿ., ಸೀತಾರಾಮ ಆಚಾರ್ಯ ಬಿ, ಕಪ್ಪೆಟ್ಟು ಜಗದೀಶ್ ಆಚಾರ್ಯ, ಗುರುಪ್ರಸಾದ್ ಶೆಟ್ಟಿ ಬಿ., ಹರಿಪ್ರಸಾದ್, ಶರತ್ ಕೆ. ಆಚಾರ್ಯ, ಜಯಶ್ರೀ ಎಸ್.ವಿ ಆಚಾರ್, ರೇಷ್ಮಾ ಚಂದನ್, ಬಿಜು ಜಯ, ಪಿ. ಪ್ರಶಾಂತ್ ಆಚಾರ್ಯ, ಬಿ.ಜಯಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.
ನಿರ್ದೇಶಕ ಭರತ್ ನಿಡ್ಪಳ್ಳಿ ಸ್ವಾಗತಿಸಿದರು. ಉಪಾಧ್ಯಕ್ಷ ಜಗದೀಶ್ ಆಚಾರ್ಯ ಪಿ ವಂದಿಸಿ, ವಾರುಣಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.