ಕರಾವಳಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಪ್ರಸ್ತುತ ಬಿಸಿಯೇರಿದ ವಾತಾವರಣವಿದ್ದು, ಈ ಬಾರಿ ಜೂನ್ 6 ರ ಸುಮಾರಿಗೆ ಮುಂಗಾರು (ಮಾನ್ಸೂನ್) ಆಗಮನದ ನಿರೀಕ್ಷೆಯಿದೆ. ಅಲ್ಲಿಯವರೆಗೆ ಕರಾವಳಿಯಲ್ಲಿ ಕೇವಲ 2 ಅಥವಾ 3 ಬಾರಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಜೂನ್ 2 ರ ವೇಳೆಗೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಇದು ಮುಂಗಾರು ಚುರುಕಾಗಲು ಸಹಕಾರಿಯಾಗಲಿದೆ. ಇದರೊಂದಿಗೆ ‘ಸೋಮಾಲಿಯಾ ಜೆಟ್ ಸ್ಟ್ರೀಮ್’ (ಸೋಮಾಲಿ ಗಾಳಿಯ ಪ್ರವಾಹ) ಉತ್ತರಕ್ಕೆ ಸೆಳೆಯಲ್ಪಡುವುದರಿಂದ ಕರ್ನಾಟಕ ಕರಾವಳಿ ತೀರದಲ್ಲಿ ವ್ಯಾಪಕ ಮಳೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಬುಧವಾರ ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ವಿವಿಧೆಡೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
2-3 ದಿನ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ
ಕರಾವಳಿ ಜಿಲ್ಲೆಗಳಲ್ಲಿ ಕಳೆದ ಶನಿವಾರ ಮತ್ತು ಭಾನುವಾರದ ಅಲ್ಲಲ್ಲಿ ಮಳೆಯ ನಂತರ, ಸೋಮವಾರ ರಾತ್ರಿಯೂ ಉಡುಪಿ ಮತ್ತು ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಅಲ್ಪ ಮಳೆಯ ಸಿಂಚನವಾಗಿದೆ. ಸದ್ಯ ಮಂಗಳೂರಿನಲ್ಲಿ ಮಂಗಳವಾರ ತಾಪಮಾನವು 32ಡಿ.ಸೆ.ದಾಟಿದ್ದು, ಧಗಧಗಿಸುವ ಉಷ್ಣಾಂಶದ ಕಾರಣದಿಂದ ಸೆಖೆಯ ವಾತಾವರಣ ಮುಂದುವರಿದಿದೆ. ಪ್ರಸ್ತುತ ಮಂಗಳೂರು ಕರಾವಳಿ ತೀರದಲ್ಲಿ ನೈಋತ್ಯ ದಿಕ್ಕಿನಿಂದ ಗಂಟೆಗೆ 4 ರಿಂದ 7 ಮೈಲಿ ವೇಗದಲ್ಲಿ ಗಾಳಿ ಬೀಸುತ್ತಿದೆ. ಮುಂದಿನ 3-4 ದಿನಗಳ ಕಾಲ ಕರಾವಳಿಯಾದ್ಯಂತ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ.
ಮೀನುಗಾರರಿಗೆ ಅಲರ್ಟ್:
ಸಮುದ್ರದಲ್ಲಿ ದಿಢೀರ್ ಗಾಳಿಯ ವೇಗ ಹೆಚ್ಚಾಗುವ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮೀನುಗಾರರು ಕರಾವಳಿ ತೀರದಲ್ಲಿ ಜಾಗ್ರತೆ ವಹಿಸುವಂತೆ ಹಾಗೂ ಹವಾಮಾನ ಇಲಾಖೆಯ ದೈನಂದಿನ ಸೂಚನೆಗಳನ್ನು ಗಮನಿಸಿಯೇ ಸಮುದ್ರಕ್ಕೆ ಇಳಿಯುವಂತೆ ಅಲರ್ಟ್ ಘೋಷಿಸಲಾಗಿದೆ.