ಸರಕಾರಿ ಆಸ್ಪತ್ರೆಗಳ ಖಾಸಗೀಕರಣವನ್ನು ತಡೆಯುತ್ತೇವೆ: ದುಂಡು ಮೇಜಿನ ಸಭೆಯ ಘೋಷಣೆ
Tuesday, May 26, 2026
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ರಾಜ್ಯ ಸರಕಾರದ ಆದೇಶವನ್ನು ಮಂಗಳೂರಿನಲ್ಲಿ ನಡೆದ ಸಮಾನ ಮನಸ್ಕ ರಾಜಕೀಯ ಪಕ್ಷಗಳು, ಸಮಾನ ಮನಸ್ಕ ಸಂಘಟನೆಗಳು ನಡೆಸಿದ 'ದುಂಡು ಮೇಜಿನ ಸಭೆ' ಸರ್ವಾನುಮತದಿಂದ ಖಂಡಿಸಿತು. ಖಾಸಗೀಕರಣದ ಆದೇಶವನ್ನು ತಕ್ಷಣವೆ ವಾಪಾಸು ಪಡೆಯಬೇಕು, ಸರಕಾರಿ ಆಸ್ಪತ್ರೆಗಳಿಗೆ ಸರಕಾರವೆ ವೈದ್ಯರ ಸಹಿತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಬಲಗೊಳಿಸಬೇಕು ಎಂದು ಸಭೆ ಆಗ್ರಹಿಸಿತು. ಸಾರ್ವಜನಿಕ ಆಸ್ಪತ್ರೆಗಳು ಇಲ್ಲದ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ತಾಲೂಕು ಆಸ್ಪತ್ರೆಗಳನ್ನು ಒದಗಿಸಬೇಕು, ಕಿದ್ವಾಯಿ, ಜಯದೇವದ ಘಟಕಗಳನ್ನು ಜಿಲ್ಲೆಗೆ ತಕ್ಷಣ ಮಂಜೂರು ಗೊಳಿಸಬೇಕು, ಪುತ್ತೂರಿಗೆ ಮಂಜೂರು ಆಗಿರುವ ಸರಕಾರಿ ಮೆಡಿಕಲ್ ಕಾಲೇಜನ್ನು ಪೂರ್ಣ ಪ್ರಮಾಣದ ಸರಕಾರಿ ಮೆಡಿಕಲ್ ಕಾಲೇಜು ಆಗಿ ಶೀಘ್ರದಲ್ಲೇ ಸ್ಥಾಪಿಸಬೇಕು ಎಂದು ಒತ್ತಾಯಿಸಿತು.
ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಖಾಸಗೀಕರಣದ ಆದೇಶ ಕೈ ಬಿಡಲು ಒತ್ತಾಯಿಸಿ, ಹಾಗು ಸಾರ್ವಜನಿಕ ಆರೋಗ್ಯ ಸೇವೆಯ ಬಲವರ್ಧನೆಗೆ ಆಗ್ರಹಿಸಿ 'ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ' ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಜಿಲ್ಲೆಯಾದ್ಯಂತ ವ್ಯಾಪಕ ಚಳವಳಿ ನಡೆಸಲು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆಗಳ ಪ್ರತಿನಿಧಿಗಳು ಒಮ್ಮತದಿಂದ ತೀರ್ಮಾನಿಸಿದರು.
ಪ್ರಥಮ ಹಂತದಲ್ಲಿ ಜಿಲ್ಲೆಯ ಎಲ್ಲೆಡೆ ಸರಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳ ಮುಂಭಾಗ ಮಾನವ ಸರಪಳಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಆ ತರುವಾಯ ತಾಲೂಕು, ಹೋಬಳಿ ಮಟ್ಟದ ಜಂಟಿ ಸಭೆಗಳು, ಸತ್ಯಾಗ್ರಹಗಳನ್ನು ನಡೆಸಲು, ಜಿಲ್ಲಾಮಟ್ಟದಲ್ಲಿ ಬೃಹತ್ ರ‌್ಯಾಲಿ ನಡೆಸಲು ಕರೆ ನೀಡಲಾಯಿತು. ಉಸ್ತುವಾರಿ ಸಚಿವರು, ವಿಧಾನಸಭೆಯ ಸಭಾಪತಿಗಳು ಸೇರಿದಂತೆ ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಸಮರ್ಥಿಸುತ್ತಿರುವ ಜನಪ್ರತಿನಿಧಿಗಳಿಗೆ ಸೂಕ್ತ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ನಿರ್ಧರಿಸಲಾಯಿತು.
ಸ್ಪೀಕರ್ ಯು.ಟಿ. ಖಾದರ್ ಅವರ ಆಕ್ಷೇಪಾರ್ಹ ನಡವಳಿಕೆಯ ವಿರುದ್ಧ ಖಂಡನಾ ನಿರ್ಣಯ:
ಇತ್ತೀಚೆಗೆ ಪುರಭವನದಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಸಭಾಪತಿ ಯು ಟಿ ಖಾದರ್ ಅವರು, ಸರಕಾರಿ ಅಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ ನಡೆಸುವವರ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ ಮಾಡಿ ನಿಂದಿಸಿರುವುದು, ಸರಕಾರದ ಖಾಸಗೀಕರಣದ ನೀತಿಯನ್ನು ಸಮರ್ಥಿಸಿರುವುದು, ಉತ್ತಮ ಸೇವೆಯನ್ನು ಖಾಸಗಿಯವರು ಮಾತ್ರ ನೀಡಬಲ್ಲರು ಎಂದು ಕೆಳಮಟ್ಟದ ಪದ ಬಳಕೆಯ ಮೂಲಕ ಸಾರ್ವಜನಿಕ, ಸರಕಾರಿ ವಲಯವನ್ನು ಕುಬ್ಜಗೊಳಿಸಿ ಮಾತಾಡಿರುವುದನ್ನು ಖಂಡಿಸಿ ದುಂಡು ಮೇಜಿನ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ಯು ಟಿ ಖಾದರ್ ಅವರು ಸ್ಪೀಕರ್ ಸ್ಥಾನದ ನೈತಿಕ ಗೆರೆಯನ್ನು ಪದೇಪದೆ ಉಲ್ಲಂಘಿಸಿ ಮಾತನಾಡುವುದು ಸರಿಯಲ್ಲ ಎಂದು ನಿರ್ಣಯದಲ್ಲಿ ಹೇಳಲಾಯಿತು. ಸ್ಪೀಕರ್ ಸ್ಥಾನದ ಘನತೆಯನ್ನು ಯು ಟಿ ಖಾದರ್ ಅವರು ಕಾಪಾಡಬೇಕು, ನೈತಿಕ ಗೆರೆಯನ್ನು ದಾಟಬಾರದು ಎಂದು ಕಿವಿಮಾತು ಹೇಳಲಾಯಿತು.
ಸಭೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ, ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್ ಎಲ್ ಪಿಂಟೊ, ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ವಾಸುದೇವ ಉಚ್ಚಿಲ, ಅಖಿಲ ಭಾರತ ವಕೀಲರ ಸಂಘದ ಯಶವಂತ ಮರೋಳಿ, ನಿತಿನ್ ಕುತ್ತಾರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ, ದಲಿತ ನಾಯಕರಾದ ಎಂ ದೇವದಾಸ್, ರಘು ಎಕ್ಕಾರು, ಕೃಷ್ಣಾನಂದ ಡಿ ಎಸ್, ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಎಂ. ಭಟ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ನ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ದ.ಕ ಜಿಲ್ಲಾ ಬೀಡಿ ಫೆಡರೇಷನ್ ನ ಪದಾಧಿಕಾರಿಗಳಾದ ಸುಕುಮಾರ್ ತೊಕ್ಕೊಟ್ಟು, ವಸಂತಿ ಕುಪ್ಪೆಪದವು, ಕರ್ನಾಟಕ ಪ್ರಾಂತ ರೈತ ಸಂಘದ ಪ್ರಮುಖರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವ ದಾಸ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ರವಿಚಂದ್ರ ಕೊಂಚಾಡಿ, ಜನವಾದಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಕಿರಣ ಪ್ರಭ, ಕಾರ್ಯದರ್ಶಿ ಪ್ರಮೀಳಾ ಕೆ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕರಿಯ ಕೆ, ಕೃಷ್ಣ ಇನ್ನಾ ಸಹಿತ ಹಲವು ಸಂಘಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.





