ಮೇ 30ರಂದು ವೈಜ್ಞಾನಿಕ ಕನಿಷ್ಠ ಕೂಲಿ ಹಾಗೂ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳ ಕಚೇರಿ ಚಲೋ
ಮಂಗಳೂರು: ವೈಜ್ಞಾನಿಕವಾಗಿ ಸರಾಸರಿ 36 ಸಾವಿರ ಕನಿಷ್ಠ ವೇತನ ನಿಗದಿಗಾಗಿ, ಕಾರ್ಮಿಕ ಸಂಹಿತೆಗಳಿಗೆ ಕಾರ್ಮಿಕರ ಪರವಾಗಿ ತಿದ್ದುಪಡಿಗಳನ್ನು ತಂದು ನಿಯಮಗಳನ್ನು ರೂಪಿಸಬೇಕೆಂದು ಹಾಗೂ ಖಾಯಂಯೇತರ ಕಾರ್ಮಿಕರ ಖಾಯಂಗೆ ಕಾನೂನು ರೂಪಿಸಬೇಕೆಂದು ಒತ್ತಾಯಿಸಿ ಮೇ 30ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆ ನಡೆಸಬೇಕೆಂಬ CITU ಕರೆಯ ಮೇರೆಗೆ ಅಂದು ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು CITU ದ.ಕ. ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಹಲವಾರು ವರ್ಷಗಳ ನಿರಂತರ ಹೋರಾಟಗಳ ಫಲವಾಗಿ ಪ್ರತಿ ಉದ್ದಿಮೆಗೆ ಪ್ರತ್ಯೇಕವಾಗಿ ಮಾಡದೇ ಬಹುತೇಕ ಉದ್ದಿಮೆಗಳಿಗೆ ಏಕರೂಪವಾಗಿ ಹಾಗೂ ಹಿಂದೆ ಇದ್ದ ನಾಲ್ಕು ವಲಯಕ್ಕೆ ಬದಲಾಗಿ ಮೂರು ವಲಯಗಳಾಗಿ ಮಾಡಿ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಮೇ 22ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ಸ್ವಾಗತಿಸುತ್ತದೆ.
ಸಿಐಟಿಯುನ ಹಕ್ಕೊತ್ತಾಯ:
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ರೆಪ್ತಕೋಸ್ ಬ್ರೆಟ್ ಆಂಡ್ ಕಂ’ (Reptakos Brett) ಪ್ರಕರಣದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಆಧರಿಸಿ ಕನಿಷ್ಠ ವೇತನ ನಿಗದಿಪಡಿಸಬೇಕೆಂಬ ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕು. ಇಂದಿನ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಎಲ್ಲಾ ಕಾರ್ಮಿಕರಿಗೆ ಸರಾಸರಿ 36,000 ರೂ. ಕನಿಷ್ಟ ವೇತನ ನಿಗದಿಪಡಿಸಬೇಕು. ರಾಜ್ಯ ಸರ್ಕಾರ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿದ ದಿನಾಂಕವಾದ 2025 ಏಪ್ರಿಲ್ 11 ರಿಂದಲೇ ಪೂರ್ವಾನ್ವಯಿಸಿ ಕನಿಷ್ಠ ವೇತನ ಜಾರಿಗೆ ತರಬೇಕು. ಒಂದು ವರ್ಷದ ಅರಿಯರ್ಸ್ ಕಾರ್ಮಿಕರಿಗೆ ನೀಡಬೇಕು. ಈ ಅಧಿಸೂಚನೆಯಿಂದ ಹೊರಗಿಟ್ಟಿರುವ ಗಾರ್ಮೆಂಟ್ಸ್ , ಪ್ಲಾಂಟೇಷನ್, ಬೀಡಿ, ಅಗರಬತ್ತಿ, ಕೈಮಗ್ಗ, ಇತರ ವಿಭಾಗದ ಕಾರ್ಮಿಕರಿಗೂ ಪ್ರಸ್ತುತ ಮೇ 22 ರಂದು ಜಾರಿಗೆ ತಂದಿರುವ ಕನಿಷ್ಠ ವೇತನವನ್ನೆ ವಿಸ್ತರಿಸಿ ಕೂಡಲೇ ಅಧಿಸೂಚನೆ ಹೊರಡಿಸಬೇಕು. ಸ್ಕೀಂ ನೌಕರರನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕು. ಪ್ರಸ್ತುತ ಪ್ರಕಟಿತ ಕನಿಷ್ಠ ವೇತನದಿಂದ ಕಾರ್ಮಿಕರಿಗೆ ಸ್ವಲ್ಪ ಪ್ರಮಾಣದಲ್ಲಿ ವೇತನ ಹೆಚ್ಚಳ ಆಗುವುದರಿಂದ ಮಾಲೀಕರ ಯಾವುದೇ ಒತ್ತಡಕ್ಕೆ ಮಣಿಯದೆ ಈ ಪರಿಷ್ಕೃತ ಕನಿಷ್ಠ ವೇತನದ ಆದೇಶವನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕೆಂದು CITU ಒತ್ತಾಯಿಸುತ್ತದೆ.
ಮೇ 30ರಂದು ಬೆಳಗ್ಗೆ 10 ಗಂಟೆಗೆ ನಾಗುರಿ ಜಂಕ್ಷನ್ ನಿಂದ ಕಾರ್ಮಿಕರ ಮೆರವಣಿಗೆ ಹೊರಟು ದ.ಕ. ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆ ನಡೆಯಲಿದೆ. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಅರ್ಪಿಸಲಾಗುವುದು. ಆದ್ದರಿಂದ ಜಿಲ್ಲೆಯ ವಿವಿಧ ವಿಭಾಗದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು CITU ದ.ಕ. ಜಿಲ್ಲಾಧ್ಯಕ್ಷ ಬಿ.ಎಂ. ಭಟ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಲಿನ ಅಂಶಗಳ ಆಧರಿಸಿ ಸಿಐಟಿಯುನಿಂದ ನಿಗದಿಯಂತೆ ಮೇ 30 ರಂದು ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ನಡೆಸಿ ಮನವಿಪತ್ರವನ್ನು ನೀಡಬೇಕು. ಈಗಾಗಲೇ ಮಾಡಿರುವ ಸಹಿಸಂಗ್ರಹವನ್ನು ಮನವಿಪತ್ರದೊಂದಿಗೆ ಸೇರಿಸಿ ನೀಡಬೇಕು. ಮಾದರಿ ಮನವಿಪತ್ರ ರಾಜ್ಯ ಸಮಿತಿಯಿಂದ ನೀಡಲಾಗುತ್ತದೆ.
ಈಗ ಪ್ರಕಟಿತ ಕನಿಷ್ಠ ವೇತನ ಅಧಿಸೂಚನೆಯು ಜಾರಿಗೆ ಬರದಂತೆ ಮಾಲೀಕರು ಹೈಕೋರ್ಟ್ ಗೆ ಹೋಗುವ ಸಾಧ್ಯತೆ ಇದೆ. ಸಿಐಟಿಯು ರಾಜ್ಯ ಸಮಿತಿ ಮತ್ತು ಕೆಲ ಸಂಘಗಳಿಂದ ಕೂಡಲೇ ಹೈಕೋರ್ಟ್ ಗೆ caveat petition file ಮಾಡಲಾಗುತ್ತದೆ. ಕಟ್ಟುನಿಟ್ಟಿನ ಜಾರಿಗಾಗಿ ಹೈಕೋರ್ಟ್ ಗೆ ಕೆಲವು ಕೈಗಾರಿಕಾ ಜನರಲ್ ಸಂಘಗಳಿಂದ ಅರ್ಜಿ ಸಲ್ಲಿಸಬೇಕು.
ಪ್ರಸ್ತುತ ಕನಿಷ್ಠ ವೇತನ ಅಧಿಸೂಚನೆ ಯಿಂದ ಹೊರಗಿಟ್ಟಿರುವ ವಿವಿಧ ಕಾರ್ಮಿಕ ವಿಭಾಗಗಳ ಸಂಘಟನೆಗಳಿಂದ ಪ್ರಕಟಿತ ಕನಿಷ್ಠ ವೇತನಕ್ಕಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಬೇಕು ಎಂದು ಆಗ್ರಹಿಸಿದೆ.